ಮಂಗಳೂರು: ತುಳು ಚಿತ್ರರಂಗದ ಮತ್ತೊಂದು ಹಾರರ್ ಚಿತ್ರ ‘ಗುಡ್ಡದ ಭೂತ’ ಮೈನವಿರೇಳಿಸುವ, ರೋಮಾಂಚನಗೊಳಿಸುವ ಸನ್ನಿವೇಶಗಳೊಂದಿಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಜನವರಿ 6. 2017 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಪಣಿಯೂರು ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇದು ಯುವಕರ ತಂಡದ ಒಂದು ಹೊಸ ಪ್ರಯತ್ನ, ಆರಂಭದ ಏಳು ಬೀಳುಗಳನ್ನು ಎದುರಿಸಿ ಈ ಚಿತ್ರ ಯಶಸ್ವಿಯಾಗಿ ಬಿಡುಗಡೆಗೆ ಸಿದ್ಧಗೊಂಡಿದೆ. ಮಂಗಳೂರು ಪ್ರಭಾತ್ ಚಿತ್ರಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 9.30 ಕ್ಕೆ ಚಿತ್ರದ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ನಾಯಕ ನಟ ಸಂದೀಪ್ ಭಕ್ತ ಮಾತನಾಡಿ ಚಲನಚಿತ್ರ ರೋಮಾಂಚನ ಸನ್ನಿವೇಶ ಮತ್ತು ಲವ್ ಸ್ಟೋರಿಯೊಂದಿಗೆ ಕುಟುಂಬ ಸಮೇತರಾಗಿ ನೋಡಬಹುದು. ತುಳು ಪ್ರೇಕ್ಷಕರು ಪ್ರೋತ್ಸಾಹಿಸಿದಲ್ಲಿ ಚಿತ್ರ ಶತದಿನ ಆಚರಿಸಬಹುದು ಎಂದರು.

ಚಲನಚಿತ್ರವು ಮಂಗಳೂರಿನಲ್ಲಿ ಪ್ರಭಾತ್, ಪಿವಿಆರ್, ಬಿಗ್ ಸಿನೆಮಾ, ಸಿನಿಪೊಲಿಶ್, ಪುತ್ತೂರಿನ ಅರುಣಾ, ಸಕಲೇಶ ಪುರದಲ್ಲಿ ಜೈಮಾರುತಿ, ಕಾರ್ಕಳದ ಪ್ಲಾನೆಟ್ ನಲ್ಲಿ ಬಿಡುಗಡೆಗೊಳ್ಳಲಿದೆ. ೨ನೇ ಹಂತದಲ್ಲಿ ಉಡುಪಿ ಮತ್ತು ಇತರ ಪ್ರದೇಶಗಳಲ್ಲಿ ಬಿಡುಗಡೆಗೊಳ್ಳಲಿದೆ.

ಈ ಚಲನ ಚಿತ್ರದ ವಿಷೇಶತೆ ಏನೆಂದರೆ ಆತ್ಮ ಮತ್ತು ದೈವದ ನಡುವೆ ಒದ್ದಾಟ ನಡೆಸುವ ಜನರ ಸಮಸ್ಯೆಗೆ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮೀಜಿಯವರು ಬಣ್ಣ ಹಚ್ಚಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವುದು. ಜೊತೆಗೆ ಉಡುಪಿಯ ಹಲವು ರಾಜಕೀಯ ಮುಖಂಡರು ಬಣ್ಣ ಹಚ್ಚಿದ್ದಾರೆ. ಯಶ್ಪಾಲ್ ಸುವರ್ಣ, ಯತೀಶ್ ಕರ್ಕೇರ, ಉದಯಕುಮಾರ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮೊದಲಬಾರಿಗೆ ಅಭಿನಯಿಸಿದ್ದಾರೆ.
ನಾಯಕ ನಟನಾಗಿ ಸಂದೀಪ್ ಭಕ್ತ, ನಾಯಕಿಯಾಗಿ ಆಶ್ವಿತಾ ನಾಯಕ್ ಅಭಿನಯಿಸಿದ್ದಾರೆ. ತುಳುನಾಡ ರತ್ನ ದಿನೇಶ್ ಅತ್ತಾವರ ಪ್ರಮುಖ ಪಾತ್ರದಲ್ಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಆರ್ ಅಂತೋಣಿ ಹಾಗೂ ಸುರೇಂದ್ರ ಪಣಿಯೂರು, ಸಂಗೀತ ನಿರ್ದೇಶನ ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಸುಭಾಷ್ ಬೋಳಾರ್ ಅವರದು. ಚಿತ್ರದ ಸಂಭಾಷಣೆ ಪ್ರಕಾಶ್ ಪೂಜಾರಿ ಮಾಡಿದ್ದಾರೆ.
ಚಿತ್ರದಲ್ಲಿ ಟೈಟಲ್ ಹಾಡಿನ ಜೊತೆ ರೊಮ್ಯಾಂಟಿಕ್ ಹಾಡು, ಮೆಲೋಡಿ ಹಾಡು, ಥ್ರಿಲ್ ಹಾಡು ಹೀಗೆ ಮೂರು ಹಾಡುಗಳಿದ್ದು, ಅವುಗಳಿಗೆ ಆರ್.ಎಸ್ ಸುರೇಶ್ ಬಲ್ಮಠ ಸಾಹಿತ್ಯ ಬರೆದಿದ್ದಾರೆ. ಉಡುಪಿ ಮತ್ತು ಕಟೀಲ್ ನ ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ.
ಶ್ರೀ ಕಟಿಲೇಶ್ವರಿ ಮೀಡಿಯಾ ಬ್ಯಾನರ್ ನಡಿಯಲ್ಲಿ ನಿರ್ಮಾಪಕರಾಗಿ ನಿತಿನ್ ಪಣಿಯೂರು ಜೊತೆಗೆ ಯತಿರಾಜ್ ಭಟ್, ನಿತ್ಯ ಅದಮಾರು ಹಾಗೂ ನಾಗರಾಜ್ ಪಣಿಯೂರು ಸಹ ನಿರ್ಮಾಪಕರಾಗಿ ಸುಮಾರು ನಲವತ್ತು ಲಕ್ಷ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಒಟ್ಟು ಸಮಯ 2.17 ನಿಮಿಷ.

ನಿರ್ದೇಶಕ ಸಂದೀಪ್ ಪಣಿಯೂರು ಕನ್ನಡದಲ್ಲಿ ಹೆಸರು ಮಾಡಿದ ‘ಗುಡ್ಡೆದ ಭೂತ’ ಧಾರವಾಹಿಯಿಂದ ಸ್ಪೂರ್ತಿಗೊಂಡು ಅದೇ ಹೆಸರಲ್ಲಿ ತುಳು ಚಲನ ಚಿತ್ರ ನಿರ್ಮಿಸಿರುವುದಾಗಿ ಹೇಳಿದ್ದಾರೆ. ಆರಂಭದ ಚಿತ್ರೀಕರಣದಲ್ಲಿ ಅಡೆತಡೆಗಳುಂಟಾಗಿ ಮತ್ತೆ ಚಿತ್ರ ಯಶಸ್ವೀಯಾಗಿ ಚಿತ್ರೀಕರಣ ಮುಗಿಸಿದ್ದು ಚಿತ್ರ ಅದ್ಬುತ ಸಂದೇಶವನ್ನು ಹೊತ್ತು ಕುಟುಂಬ ಸಮೇತ ವೀಕ್ಷಿಸುವ ಮನೋರಂಜನಾ ಚಿತ್ರ ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ನಟರಾದ ಚಿದಾನಂದ ಕಾಮತ್, ದಿನೇಶ್ ಅತ್ತಾವರ, ನೆಲ್ಸನ್ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.
