ಬಂಟ್ವಾಳ: ಊರಿನವರು ದೂರು ನೀಡಿದರೂ ನೇತ್ರಾವತಿಯ ಒಡಲಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸ್ಥಳೀಯ ನಾಗರೀಕರು ಗ್ರಾಮ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಅಕ್ರಮ ತಡೆಯುವ ಯತ್ನಕ್ಕೆ ಕೈ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆ ಹಾಗು ಬಿಳಿಯೂರು ಗ್ರಾಮದಲ್ಲಿ ನಡೆದಿದೆ.
ಬಿಳಿಯೂರು ಕೊಳೆಂಚಿಯಡ್ಕ ಎಂಬಲ್ಲಿ ನೇತ್ರಾವತಿ ನದಿ ತಟದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಯಾವ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂಬ ಅಳಲು ಸಾರ್ವಜನಿಕರದ್ದಾಗಿದೆ. ಅಧಿಕಾರಿಗಳು ದಾಳಿ ನಡೆಸಿದರೂ ದಂಧೆ ಮಾತ್ರ ನಡೆಯುತ್ತಲೇ ಇದೆ. ಎರಡು ತಿಂಗಳ ಹಿಂದೆ ಪೊಲೀಸ್ ಇಲಾಖೆ ದಾಳಿ ನಡೆದಿದೆ. ಬಳಿಕ ವಾರದ ಹಿಂದೆ ನಾಗರೀಕರೇ ಒಂದು ಲಾರಿಯನ್ನು ಹಿಡಿದು ಪುತ್ತೂರು ಸಹಾಯಕ ಅಧೀಕ್ಷಕ ರಿಷ್ಯಂತ್ ಅವರಿಗೆ ಮಾಹಿತಿ ನೀಡಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಇಷ್ಟಾದರೂ ನಿಲ್ಲದ ದಂಧೆಯಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ. ಮಂಗಳವಾರ ಮತ್ತೆ ಮಿನಿ ಲಾರಿಯನ್ನು ನಾಗರೀಕರು ಹಿಡಿದು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಊರಿನವರ ಇಂತಹ ಕಾರ್ಯದಿಂದ ದಂಧೆ ಕೋರರಿಗೆ ತೊಂದರೆಯಾಗುತ್ತಿದೆ. ಇದಕ್ಕಾಗಿ ಸಮಿತಿಯ ಕೆಲವು ಸದಸ್ಯರಿಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆನ್ನಲಾಗಿದೆ. ಈ ಮೂಲಕ ಊರಿನವರ ಹೋರಾಟವನ್ನು ತಡೆಯುವ ಪ್ರಯತ್ನ ದಂಧೆಕೋರರು ನಡೆಸುತ್ತಿದ್ದಾರೆ.

