ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ ಶೆಟ್ಟಿಗಾರರು ಕಡಿಮೆ ಸಂಖ್ಯೆಯಲ್ಲಿದ್ದರೂ ಅತ್ಯಂತ ಶಿಸ್ತುಬದ್ಧ ಮತ್ತು ಸಂಘಟಿತ ಸಮಾಜ ಮಾತ್ರವಲ್ಲದೆ ಸಾಧನಾಶೀಲರಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದಾಗಿ ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಇವರಂತಹ ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಸಂಗಬೆಟ್ಟು ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನ ಮೈದಾನದಲ್ಲಿ ಜಿಲ್ಲಾ ಪದ್ಮಶಾಲಿ ಮಹಾಸಭಾ ವತಿಯಿಂದ ಭಾನುವಾರ ಸಂಜೆ ನಡೆದ ಪದ್ಮಶಾಲಿ ಅವಿಭಜಿತ ಜಿಲ್ಲಾ ಮಟ್ಟದ ಕ್ರೀಡೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಜಯರಾಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಭೂನ್ಯಾಯ ಮಂಡಳಿ ಮಾಜಿ ಸದಸ್ಯ ರೊನಾಲ್ಡ್ ಮೊರಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್, ಹಿರಿಯ ಗುರಿಕಾರರಾದ ಗಂಗಾಧರ, ಮಹಾಬಲ, ಎಸ್.ಎಲ್.ಶೆಟ್ಟಿಗಾರ್, ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಪ್ರಮುಖರಾದ ಸೀತಾರಾಮ ಶೆಟ್ಟಿ, ಮಹಮ್ಮದ್ ಸಂಗಬೆಟ್ಟು, ಜಯಕರ ಶೆಟ್ಟಿ, ಅಶೋಕ್ ಆಚಾರ್ಯ, ಭುಜಬಲಿ ಕಂಬಳಿ ಮತ್ತಿತರರು ಇದ್ದರು.
ಸನ್ಮಾನ:
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ ಮುಕ್ಯಪ್ರಾಣ ಕಿನ್ನಿಗೋಳಿ ಮತ್ತು ಪ್ರಗತಿಪರ ಕೃಷಿಕ , ಕ್ರೀಡೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ನೋಣಯ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಪಾಲ್ಗೊಂಡರು. ನಿವೃತ್ತ ಅರಣ್ಯಾಧಿಕಾರಿ ದಾಮೋದರ ಶೆಟ್ಟಿಗಾರ್ ಸ್ವಾಗತಿಸಿ, ಸುಂದರ ಸಂಗಬೆಟ್ಟು ವಂದಿಸಿದರು.

