ಬಂಟ್ವಾಳ: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಎಲೋಶಿಯಸ್ ಪಾವ್ಲ್ ಡಿಸೋಜ ಅವರು ಗುರುದೀಕ್ಷೆಯನ್ನು ಪಡೆದು 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಬಂಟ್ವಾಳದ ಅಗ್ರಾರ್ ಚರ್ಚ್‍ನಲ್ಲಿ ಡಿ. 4ರಂದು ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸಲಾಗುವುದು ಎಂದು ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್ ತಿಳಿಸಿದ್ದಾರೆ.

pressmeet-1

ಬುಧವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ಮೂವರು ಬಿಷಪರು, ನೂರಾರು ಧರ್ಮಗುರುಗಳ ಹಾಗೂ ಸಾವಿರಾರು ಭಕ್ತಾಧಿಗಳ ಉಪಸ್ಥಿತಿಯಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದ್ದು ಬಳಿಕ 11:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಮಾರಂಭದಲ್ಲಿ ಉಡುಪಿ, ಬಳ್ಳಾರಿ, ಅಜ್ಮೀರ್ ಧರ್ಮಪ್ರಾಂತ್ಯದ ಬಿಷಪರುಗಳಾದ ಡಾ. ಜೆರಾಲ್ಡ್ ಐಸಾಕ್ ಲೋಬೋ, ಡಾ. ಹೆನ್ಡ್ರಿ ಡಿಸೋಜ, ಡೆನ್ನೀಸ್ ಮೋರಸ್ ಪ್ರಭು, ಸಚಿವರುಗಳಾದ ಕೆ.ಜೆ.ಜಾರ್ಜ್, ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದರಾದ ನಳೀನ್ ಕುಮಾರ್ ಕಟೀಲ್, ಆಸ್ಕರ್ ಫರ್ನಾಡಿಸ್, ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಸಹಿತ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುವರ್ಣ ಮಹೋತ್ಸವದ ಪ್ರಯುಕ್ತ ಡಿ. 2ರಂದು ಮಧ್ಯಾಹ್ನ 2:30ಕ್ಕೆ ಬಂಟ್ವಾಳ ವಲಯ ಮತ್ತು ಪರಿಸರದ 15 ಚರ್ಚ್‍ಗಳ ವ್ಯಾಪ್ತಿಯ ಹಿಂದು, ಮುಸ್ಲಿಮ್, ಕ್ರೈಸ್ತ ಧರ್ಮಿಯರ ಹೊರ ಕಾಣಿಕೆ ಮೆರವಣಿಗೆಯು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬೈಪಾಸ್ ರಸ್ತೆಯ ಮೂಲಕ ಅಗ್ರಾರ್ ಚರ್ಚ್‍ಗೆ ತಲುಪಲಿದೆ ಎಂದ ಅವರು, ಸಮಾರಂಭದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಇವರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಎಲ್ಲ ಧರ್ಮಿಯರು ಧರ್ಮಾಧ್ಯಕ್ಷರ ಹುಟ್ಟೂರಿನಲ್ಲಿ ನಡೆಯುವ ಈ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

press-2

1941ರ ಜೂನ್ 20ರಂದು ಅಗ್ರಾರ್‍ನ ಹೆಕ್ಕೊಟ್ಟು ಎಂಬಲ್ಲಿ ಮಥಾಯಿಸ್ ಹಾಗೂ ಇಸಾಬೆಲ್ಲಾ ಡಿಸೋಜ ಅವರ 7 ಮಕ್ಕಳಲ್ಲಿ ಆರನೆಯವರಾಗಿ ಜನಿಸಿದ ಎಲೋಸಿಯಸ್ ಪಾವ್ಲ್ ಡಿಸೋಜ ಅವರು ಪ್ರಾಥಮಿಕ ಶಿಕ್ಷಣವನ್ನು ಅಗ್ರಾರ್ ಚರ್ಚ್ ಅ.ಹಿ.ಪ್ರಾ.ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಬಂಟ್ವಾಳ ಎಸ್‍ವಿಎಸ್ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. 1966ರ ಡಿ. 3ರಂದು ಅಗ್ರಾರ್ ಚರ್ಚ್‍ನಲ್ಲಿ ಗುರುದೀಕ್ಷೆಯನ್ನು ಪಡೆದಿದ್ದರು ಎಂದ ಅವರು, ದೇಶದ ತನ್ನ ಕಾರ್ಯವ್ಯಾಪ್ತಿಯಲ್ಲಿ ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ ಎಂದರು.

ಅವರು 20 ವರ್ಷಗಳ ಕಾಲ ಧರ್ಮಾಧ್ಯಕ್ಷರಾಗಿ ಸಾರ್ಥಕ ಸೇವೆ ಹಾಗೂ 75 ವರ್ಷಗಳ ಸಫಲ ಜೀವನ ನಡೆಸಿದ್ದಾರೆ. ಸಮಾಜದ ಸರ್ವ ಬಾಂಧವರಿಗೂ ನೀಡಿದ ಸೇವೆ ಹಾಗೂ ಕೊಡುಗೆಯನ್ನು ಸ್ಮರಿಸಿ ಹುಟ್ಟೂರಲ್ಲಿ ಗೌರವಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಮ್ಯಾಕ್ಸಿಂ ಎಲ್. ನೊರೋನ, ಅಗ್ರಾರ್ ಚರ್ಚ್‍ನ ಧರ್ಮ ಗುರು ಗ್ರೆಗರಿ ಡಿಸೋಜ, ವಲಯ ಕಾರ್ಯದರ್ಶಿ ವಿಕ್ಟರ್ ಮೆನೆಜಸ್, ಪ್ರಚಾರ ಸಮಿತಿ ಸಂಚಾಲಕ ವಿನ್ಸೆಂಟ್ ಕಾರ್ಲೋ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರದ್ದರು.

By Suddi9

Leave a Reply

Your email address will not be published. Required fields are marked *