ಮೂಡುಬಿದಿರೆ: ಬಜರಂಗದಳ ತಾಲೂಕು ಸಹ ಸಂಚಾಲಕರ ಮನೆಯ ಹಟ್ಟಿಯಿಂದ ದನವೊಂದನ್ನು ಅಪಹರಿಸಿರುವ ಪ್ರಕರಣ ಇರುವೈಲಿನಲ್ಲಿ ಕಳೆದ ಶುಕ್ರವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ತಾಲೂಕು ಸಹ ಸಂಚಾಲಕ ಭರತ್ ಕುಮಾರ್ ಶೆಟ್ಟಿ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ರೂ 35 ಸಾವಿರ ಮೌಲ್ಯದ ಜೆರ್ಸಿ ದನವನ್ನು ಶುಕ್ರವಾರ ನಸುಕಿನ ಜಾವ 3 ಗಂಟೆಯ ವೇಳೆಗೆ ಭರತ್ ಅವರ ತಂದೆ ಹೋಗಿ ನೋಡಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಹಟ್ಟಿಯಲ್ಲಿ ದನ ನಾಪತ್ತೆಯಾಗಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಕ ಭರತ್ ಕುಮಾರ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಮೂಡುಬಿದಿರೆಯಲ್ಲಿ ಗೋ ಕಳ್ಳತನದ ಮೂಲಕ ಶಾಂತಿ ಸಾಮರಸ್ಯ ಕದಡುವ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಬಗ್ಗೆ ಪೋಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದರಿಂದ ಉಂಟಾಗುವ ಅಹಿತಕರ ಘಟನೆಗಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
