ಮೂಡುಬಿದಿರೆ: ಬೆಳುವಾಯಿ ಶ್ರೀಯಕ್ಷದೇವ ಮಿತ್ರ ಕಲಾ ಮಂಡಳಿ ಇದರ “ಶ್ರೀ ಯಕ್ಷದೇವ – 20” ವಿಶಂತಿ ಕಲೋತ್ಸವ, ಪುಸ್ತಕ ಬಿಡುಗಡೆ ಹಾಗೂ ತೆಂಕುತಿಟ್ಟು ಮಕ್ಕಳ ಯಕ್ಷಗಾನ ಸ್ಪರ್ಧೆ, ಯಕ್ಷ ಗುರುಗಳ ಸಂಮಾನ ಕಾರ್ಯಕ್ರಮ ಅ 22 ಮತ್ತು 23ರಂದು ಸಮಾಜ ಮಂದಿರದಲ್ಲಿ ಜರಗಲಿದೆ ಎಂದು ಯಕ್ಷದೇವ ಮಿತ್ರಕಲಾ ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ. 22ರಂದು ಬೆಳಿಗ್ಗೆ 8.30ಕ್ಕೆ ತೆಂಕುತಿಟ್ಟು ಮಕ್ಕಳ ಯಕ್ಷಗಾನ ಸ್ಪರ್ಧೆಯನ್ನು ಕಟೀಲು ಮೇಳದ ಭಾಗವತ ಕುಬಣೂರು ಶ್ರೀಧರ ರಾವ್ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ಡಾ. ಶ್ರೀಧರ ಭಂಡಾರಿ ಹಾಗೂ ಕಟೀಲು ಮೇಳದ ಯಕ್ಷಗಾನ ಕಲಾವಿದ ವಿಷ್ಣು ಶರ್ಮ ಪಣಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅ. 23ರಂದು ವಿಶಂತಿ ಕಲೋತ್ಸವವನ್ನು ಸಾಲಿಗ್ರಾಮ ಮೇಳದ ಸಂಚಾಲಕ ಕಿಶನ್ ಹೆಗ್ಡೆ ಉದ್ಘಾಟಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಜೈನಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ವಿಮರ್ಶಕ ಎ. ಈಶ್ವರಯ್ಯ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ ಪುರಾಣಿಕ್ 10ಮಂದಿ ಯಕ್ಷಗುರುಗಳನ್ನು ಸನ್ಮಾನಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಕೆ. ಅಭಯಚಂದ್ರ ಜೈನ್, ಉದ್ಯಮಿ ಭಾಸ್ಕರ್ ಎಸ್. ಕೋಟ್ಯಾನ್, ಮಂಗಳೂರು ವಿಮಾನ ನಿಲ್ದಾಣದ ನಿಕಟ ಪೂರ್ವ ನಿರ್ದೇಶಕ ಎಂ. ಆರ್ ವಾಸುದೇವ, ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯು.ಎಸ್.ಎ ಪುತ್ತಿಗೆ ಮಠದ ಕಿರಣ್ ಕುಮಾರ್, ಉದ್ಯಮಿ ಉದಯ ಶೆಟ್ಟಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 6ಕ್ಕೆ ಸಮಾರೋಪ- ವಿಜೇತ ತಂಡಗಳಿಗೆ ಪ್ರಶಸ್ತಿ, ಪ್ರದಾನ ನಡೆಯಲಿದೆ. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿಗಳಾದ ರಘುನಾಥ ದೇವಾಡಿಗ, ಗಣೇಶ್ ಶೆಟ್ಟಿ, ಶ್ರೀ ಕುಮಾರ್, ನವೀನ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

