ಮೂಡುಬಿದಿರೆ: ಹಂಚಿನ ಮನೆಗೆ ರೂ.5ರಿಂದ 6ಕ್ಕೆ ಹಾಗೂ ರೂ.7ರಿಂದ 10ರವೆರೆಗೆ ಏರಿಕೆ ಮಾಡಲಾಗಿದೆ. ಹಿಂದೆ ರೂ.150 ತೆರಿಗೆ ಬರುತ್ತಿದ್ದ ನಾವು ಇಂದು ಸುಮಾರು 900ರವರೆಗೆ ತೆರಿಗೆ ಪಾವತಿಸುವಂತಾಗಿದೆ ಎಂದು ಪಡುಮಾರ್ನಾಡು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮನೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ನಿಗಧಿಪಡಿಸಲಾಗಿದೆ. ಪ್ರತಿ ಎರಡು ವರ್ಷಕೊಮ್ಮೆ ತೆರಿಗೆ ಹೆಚ್ಚಳವಾಗುತ್ತದೆ. ತೆರಿಗೆ ದರದಲ್ಲಿ ಲೋಪದೋಷಗಳಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ಶ್ರೀನಾಥ ಸುವರ್ಣ ಸ್ಪಷ್ಟನೆ ನೀಡಿದರು.
ಬನ್ನಡ್ಕದಲ್ಲಿ ಪಂಚಾಯಿತಿ ಅಧೀನದ 4 ಅಂಗಡಿಯಳಿವೆ. ಬಿಡ್ಡುದಾರರು ಅಧಿಕ ಮೊತ್ತಕ್ಕೆ ಬಿಡ್ಡಿಗೆ ಗೆದ್ದಿದ್ದರೂ., ಅದು ಖಾಲಿಯಾಗಿವೆ. ಬಾಡಿಗೆಯನ್ನು ಸರಿಯಾಗಿ ಪಂಚಾಯಿತಿಗೆ ಕಟ್ಟುತ್ತಿಲ್ಲ. ಈ ಕುರಿತು ಪರಿಶೀಲಿಸಿ, ಬಡವರಿಗೆ ಅಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಗ್ರಾಮಸ್ಥ ರೋಶನ್ ಒತ್ತಾಯಿಸಿದರು. ಪರಿಶೀಲನೆ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.
ವೈದ್ಯಾಧಿಕಾರಿ ತರಾಟೆ:
ಸಂದ್ಯಾ ಸುರಕ್ಷ ಯೋಜನೆಯ ಅರ್ಜಿ ಪತ್ರ ವೈದ್ಯಾಧಿಕಾರಿಗಳ ಬಳಿಯಿದ್ದರೆ ಸಹಿ ಪಡೆಯುವ ಸಮಯದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಇಲ್ಲಿವಾದಲ್ಲಿ ಅರ್ಜಿ ಪತ್ರಕ್ಕೆ ಅಲೆದಾಡಬೇಕಾಗುತ್ತದೆ ಎಂದು ಕೆಲವು ಗ್ರಾಮಸ್ಥರು ಕೋರಿಕೆಯನ್ನು ಮಾಡಿದರು. ನನಗೆ ಆಸ್ಪತ್ರೆಯಲ್ಲಿ ಬೇಕಾದಷ್ಟು ಕೆಲಸವಿದೆ. ಅನಗತ್ಯ ಕೆಲಸ ಮಾಡುವುದಕ್ಕೆ ಸಮಯವಿಲ್ಲ. ಅದನ್ನು ಯಾವ ಇಲಾಖೆಯವರು ಕೊಡಬೇಕೋ ಅವರೇ ಕೊಡಲಿ ಎಂದು ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್ ಹೇಳಿದಾಗ `ಸರ್ಕಾರಿ ನೌಕರಿಯಲ್ಲಿರುವ ತಾವು ಅನಗತ್ಯ ಕೆಲಸವೆಂದು ಹೇಳಬೇಡಿ’ ಎಂದು ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಪಂಚಾಯಿತಿಯಲ್ಲಿ ಸಂದ್ಯಾ ಸುರಕ್ಷತೆಯ 150 ಅರ್ಜಿಪತ್ರಗಳನ್ನು ನೀಡುತ್ತೇವೆ. ಅಗತ್ಯವುಳ್ಳವರು ಪಂಚಾಯಿತಿಯಿಂದ ಪಡೆದುಕೊಳ್ಳಬಹುದೆಂದು ಎಂದು ಶ್ರೀನಾಥ್ ಸುವರ್ಣ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿ.ಸಿ ಮನ್ನಾ ಜಾಗವನ್ನು ಗುರುತಿಸಿ, ಎಸ್ಸಿ ಎಸ್ಟಿಗಳಿಗೆ ವಿತರಿಸುವಂತೆ ನವೀನ್ ಆಗ್ರಹಿಸಿದರು. ಡೀಮ್ಡ್ ಫಾರೆಸ್ಟ್ನಿಂದಾಗಿ ನಿವೇಶನವನ್ನು ಗುರುತಿಸಲು ವಿಳಂಭವಾಗುತ್ತಿದೆ. ಡೀಮ್ಡ್ ಫಾರೆಸ್ಟ್ ಸಡಿಲಿಕೆ ನಂತರ ಡಿಸಿ ಮನ್ನಾ ಜಾಗದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಕರಣಿಕ ಸುರೇಶ್ ತಿಳಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರುಣಾ ಹೆಗ್ಡೆ, ಪಿಡಿಒ ರವಿ ಸಭೆಯಲ್ಲಿ ಭಾಗವಹಿಸಿದರು. ಕೃಷಿ ಅಧಿಕಾರಿ ನರಸಿಂಹ ನೋಡೆಲ್ ಅಧಿಕಾರಿಯಾಗಿದ್ದರು.

