ಬೆಂಗಳೂರು: ರಾಜ್ಯದಲ್ಲಿ “ದೊಡ್ಮನೆ” ಎಂದೇ ಖ್ಯಾತಿಯಾಗಿದ್ದ ಅಣ್ಣಾವ್ರ ಆಸ್ತಿ ಪಾಲಾಗಿರುವ ಸುದ್ದಿ ಹೊರಬಿದ್ದಿದೆ. ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಅ.17ರಂದು ಸೋಮವಾರ ಮಾಡಿಕೊಂಡಿದ್ದಾರೆ.
ರಾಜ್ ಕುಮಾರ್ ಅವರ ಕುಟುಂಬ ಸದಸ್ಯರೆಲ್ಲರ ಸಹಮತದೊಂದಿಗೆ ಎಲ್ಲರೂ ಚರ್ಚಿಸಿ, ಚಾಮರಾಜ ನಗರದ ಬಳಿಯಿರುವ ಗಾಜನೂರಿನಲ್ಲಿರುವ ಒಟ್ಟು 60 ಎಕರೆ ಭೂಮಿಯನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಲಕ್ಷ್ಮೀ ಹಾಗೂ ಪೂರ್ಣಿಮಾ ಅವರು ಕುಟುಂಬ ಸಮೇತರಾಗಿ ಐದೂ ಜನ ರಾಜ್ ಕುಮಾರ್ ಅವರ ಹುಟ್ಟೂರು ಗಾಜನೂರಿಗೆ ಹೋಗಿದ್ದು, ಅಲ್ಲಿಂದ ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೂ ಭೇಟಿ ನೀಡಿ, ಆಸ್ತಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಗಾಜನೂರಿನಲ್ಲಿ ಸುಮಾರು 50 ಎಕರೆ ಜಮೀನು ಅಣ್ಣಾವ್ರ ಕುಟುಂಬದ ಹೆಸರಿನಲ್ಲಿದೆ ಎನ್ನಲಾಗಿದೆ. ಗಾಜನೂರು ಹಾಗೂ ತಾಳವಾಡಿಯಲ್ಲಿ ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಆಗಮಿಸಿದ ಸುದ್ದಿ ತಿಳಿದ ಅಭಿಮಾನಿಗಳು, ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಹುದಿನಗಳ ಹಿಂದೆಯೇ ಪಿತ್ರಾರ್ಜಿತ ಆಸ್ತಿ ಹಂಚಿಕೆ ಬಗ್ಗೆ ತೀರ್ಮಾನಿಸಲಾಗಿದ್ದು, ಎಲ್ಲರೂ ಬಿಡುವು ಮಾಡಿಕೊಂಡು ಗಾಜನೂರಿಗೆ ಹೋಗಿದ್ದಾರೆಂದು ಹೇಳಲಾಗಿದೆ.
ನಟ ಸಾರ್ವಭೌಮ ಡಾ.ರಾಜಕುಮಾರ್ ಅವರು ಬರೆದಿರುವ ವಿಲ್‌ನಂತೆಯೇ ಆಸ್ತಿ ವಿಭಜನೆಯಾಗಿದ್ದು, ಯಾವುದೇ ವ್ಯಾಜ್ಯಗಳಿಗೆ ಆಸ್ಪದ ನೀಡದೆ ಮಕ್ಕಳು ತಮ್ಮ ಪಾಲಿಕೆ ಬಂದ ಪಂಚಾಮೃತವನ್ನು ಖುಷಿಯಿಂದ ಸ್ವೀಕರಿಸಿದರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಘವೇಂದ್ರ ರಾಜಕುಮಾರ್, ಅಪ್ಪಾಜಿ ಬದುಕಿರುವಾಲೇ ವಿಲ್ ಬರೆದಿಟ್ಟಿದ್ದರು. ಅಪ್ಪಾಜಿ ಆಸೆಯಂತೆ ಆಸ್ತಿ ಹಂಚಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.

