ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳ ಮಾಂಸವನ್ನು ಮಾರುತ್ತಿದ್ದಾರೆಂದು ಖಚಿತ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ದಾಳಿ.

ಅಮ್ಮೆಮ್ಮಾರಿನ ಮನ್ಸೂರು ಎಂಬಾತನಿಗೆ ಸೇರಿದ ಈ ಮನೆಯಲ್ಲಿ ಕಳೆದ ಹಲವು ಸಮಯಗಳಿಂದ ಅಕ್ರಮವಾಗಿ ಗೋವಧೆಯನ್ನು ನಡೆಸಲಾಗುತ್ತಿದೆ ಎಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ಕಾರ್ಯವನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಮನ್ಸೂರು , ಈತನ ತಮ್ಮ ಲತೀಫ್ ಹಾಗೂ ಸ್ನೇಹಿತ ತಸ್ಲೀಮ್ ಸಹಿತ ಇನ್ನು ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.


ಈ ಸಂಬಂಧ ಘಟನಾ ಸ್ಥಳದಲ್ಲಿ 9 ಜಾಣುವಾರುಗಳಿದ್ದು, ಈ ಪೈಕಿ 1 ಗೋವನ್ನು ವಧೆ ಮಾಡಲಾಗಿದ್ದು, ಅದರ ಮಾಂಸದ ತಯಾರಿ ನಡೆಸುತ್ತಿದ್ದರೆನ್ನಲಾಗಿದೆ. 1 ಇನೋವಾ ಕಾರು, 2 ಮೋಟಾರು ಸೈಕಲ್, ಮಾಂಸ ಕಡಿಯುವ ಆಯುಧಗಳು, ತೂಕದ ತಕ್ಕಡಿ ಮತ್ತು ಬಟ್ಟಲುಗಳು, 3 ದ್ವಿಚಕ್ರದ ವಾಹನಗಳನ್ನು ಒಟ್ಟು 6ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 158|2016 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಪಶುವೈದ್ಯಾಧಿಕಾರಿ ಪ್ರಕಾಶ್ ಬೆನ್ನೂರು ಅವರನ್ನು ಕರೆಸಿ ಸ್ಥಳಪರಿಶೀಲನೆ ನಡೆಸಲಾಗಿದೆ. ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಯಲ್ಲಿ ಎಸೈ ರಕ್ಷಿತ್ ಜೊತೆಗೆ ಸಿಬ್ಬಂದಿಗಳಾದ ಜಗದೀಶ್, ಪ್ರವೀಣ್, ಸುರೇಶ್, ಜಯರಾಮ್, ಬಸವರಾಜ್, ಶಿವರಾಜ್, ಶಿವಕುಮಾರ್, ಮನೋಜ್, ಲೋಕೇಶ್, ಮನೋಜ್, ಕುಮಾರ್, ಸುರೇಶ್, ಚಾಲಕರಾದ ಯೋಗೀಶ್, ಪ್ರವೀಣ್ ಮೊದಲಾದವರು ಭಾಗವಹಿಸಿದ್ದರು.

