ಬಂಟ್ವಾಳ: ತಾಲ್ಲೂಕಿನ ಸಜಿಪಮೂಡ ಗ್ರಾಮದ ಕೊಳಕೆ ಸಮೀಪದ ಕೂಡೂರು ಎಂಬಲ್ಲಿ ಕಾಲುದಾರಿಯಲ್ಲಿ ಹೆಬ್ಬಾವು ಬಾಯಿಗೆ ಸಿಲುಕಿ ಅದರೊಂದಿಗೆ ಸೆಣಸಾಡಿ 11ರ ಹರೆಯದ ಪುಟ್ಟ ಬಾಲಕ ಪಾರಾದ ಅಪರೂಪದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಗಾಯಾಳುವನ್ನು ಇಲ್ಲಿನ ನಿವಾಸಿ ಸುರೇಶ ಬೆಳ್ಚಡ ಮತ್ತು ಹರಿಣಾಕ್ಷಿ ದಂಪತಿ ಪುತ್ರ ವೈಶಾಖ್ (11) ಎಂದು ಗುರುತಿಸಲಾಗಿದೆ. ಸಜಿಪನಡು ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿರುವ ವೈಶಾಖ್ ಎಂದಿನಂತೆ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ತನ್ನ ಸಹೋದರಿ ಇದೇ ಶಾಲೆಯಲ್ಲಿ ಕಲಿಯುತ್ತಿರುವ ಎರಡನೇ ತರಗತಿ ವಿದ್ಯಾರ್ಥಿನಿ ವಂಶಿ ಜೊತೆಗೆ ಮನೆಗೆ ಬಂದಿದ್ದಾರೆ.
ತಂದೆ ಸುರೇಶ ಬೆಳ್ಚಡ ಅವರು ಸೆಂಟ್ರಿಂಗ್ ಕೆಲಸ ಮತ್ತು ತಾಯಿ ಹರಿಣಾಕ್ಷಿ ಕೂಡಾ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಇದರಿಂದಾಗಿ ವೈಶಾಖ್ ಪಕ್ಕದಲ್ಲೇ ಇರುವ ದೊಡ್ಡಮ್ಮನ ಮೆನೆಗೆಂದು ಹೋಗಿ ಬರುವುದಾಗಿ ಸಹೋದರಿ ವಂಶಿಗೆ ತಿಳಿಸಿ ಹೊರಟಿದ್ದಾರೆ. ಇಲ್ಲಿನ ಕೂಡೂರು ಕಾಲುದಾರಿಯಲ್ಲಿ ಸುತ್ತು ಹಾಕಿ ಮಲಗಿದ್ದ ಹೆಬ್ಬಾವಿನ ಮಧ್ಯೆ ಗೊತ್ತಿಲ್ಲದೆಯೇ ಕಾಲು ಇಟ್ಟಿದ್ದಾರೆ ಎನ್ನಲಾಗಿದೆ. ತಕ್ಷಣವೇ ಕುಸಿದು ಬಿದ್ದ ಬಾಲಕನ ಕಾಲುಗಳನ್ನು ಸುತ್ತುವರಿದ ಹೆಬ್ಬಾವು ಆತನ ಕಾಲನ್ನು ನುಂಗಲು ಯತ್ನಿಸಿದೆ. ಇದೇ ವೇಳೆ ಬಾಲಕನು ಬೊಬ್ಬೆ ಹಾಕುತ್ತಾ ಪಕ್ಕದಲ್ಲೇ ಇದ್ದ ಕಲ್ಲೊಂದನ್ನು ಎತ್ತಿ ಮಲಗಿದಲ್ಲಿಂದಲೇ ಹೆಬ್ಬಾವಿನ ತಲೆ ಮತ್ತು ಕಣ್ಣಿಗೆ ಹೊಡೆದಿದ್ದಾರೆ.
ಇದೇ ವೇಳೆ ಈತನ ಬೊಬ್ಬೆ ಕೇಳಿ ದೊಡ್ಡಮ್ಮನ ಮಗಳು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿ ಹರ್ಷಿತಾ ಧಾವಿಸಿ ಬಂದಿದ್ದಾರೆ. ಈಕೆಯನ್ನು ದೂರದಲ್ಲೇ ಇರುವಂತೆ ಸೂಚಿಸಿದ ಬಾಲಕ ಕೆಲಹೊತ್ತು ಹೆಬ್ಬಾವಿನ ಜೊತೆಗೆ ಸೆಣಸಾಡಿ, ಅದರ ತಲೆಗೆ ಮತ್ತೆ ಮತ್ತೆ ಕಲ್ಲಿನಿಂದ ಹೊಡೆದಾಗ ಕಣ್ಣಿಗೆ ಗಾಯಗೊಂಡ ಹೆಬ್ಬಾವು ಆತನ ಕಾಲನ್ನು ಬಿಟ್ಟು ಪಕ್ಕದ ಬಂಡೆಯೊಂದರ ಎಡೆಯಲ್ಲಿ ಸರ ಸರನೆ ಪಲಾಯನ ಮಾಡಿದೆ ಎಂದು ಪ್ರತ್ಯಕ್ಷದರ್ಶಿ ಹರ್ಷಿತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ಆ ಬಳಿಕ ಕೈ ಕಾಲುಗಳಿಗೆ ಹೆಬ್ಬಾವು ಕಚ್ಚಿದ ಗಾಯಗೊಂಡ ವೈಶಾಖ್ನನ್ನು ಹರ್ಷಿತಾ ತನ್ನ ಮನೆಗೆ ಕರೆದುಕೊಂಡು ಹೋಗಿ ಕೂಡಲೇ ತಂದೆ ಜಗದೀಶ ಬೆಳ್ಚಡ ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಇದರಿಂದಾಗಿ ಗಾಯಾಳುವನ್ನು ಕೂಡಲೇ ಬಿ.ಸಿ.ರೋಡ್ ಮತ್ತು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿ ಅವರ ಸಲಹೆಯಂತೆ ರಾತ್ರಿಯೇ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ವೈಶಾಖ್ ಚೇತರಿಸಿಕೊಂಡಿದ್ದು, ಬುಧವಾರ ರಾತ್ರಿ ಆತನನ್ನು ವಾರ್ಡಿಗೆ ವರ್ಗಾಯಿಸಲಾಗುತ್ತದೆ ಎಂದು ಜಗದೀಶ ಬೆಳ್ಚಡ ತಿಳಿಸಿದ್ದಾರೆ.
ಧನಸಹಾಯ:
ಸಜಿಪನಡು ಆದರ್ಶ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು ಗಾಯಾಳು ವೈಶಾಖ್ ಅವರನ್ನು ಆಸ್ಪತ್ರೆಯಲ್ಲಿ ಬುಧವಾರ ಭೇಟಿ ನೀಡಿ ರೂ 10ಸಾವಿರ ಮೊತ್ತದ ಧನಸಹಾಯ ನೀಡುವ ಮೂಲಕ ತನ್ನ ಶಾಲೆಯ ವಿದ್ಯಾರ್ಥಿಯನ್ನು ಸಂತೈಸಿ ಸಾಧನೆಗೆ ಅಭಿನಂದಿಸಿದ್ದಾರೆ.

