ಬಂಟ್ವಾಳ: ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಸುವ ನಿಟ್ಟಿನಲ್ಲಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 12 ಮೀಟರ್ ಎತ್ತರದ ಹೊಸ ಡ್ಯಾಂನಲ್ಲಿ ಪ್ರಸ್ತುತ ವರ್ಷ 5 ಮೀಟರ್ ಮಾತ್ರ ನೀರು ಶೇಖರಿಸಲಾಗುವುದು ಎಂದು ಮನಪಾ ಮೇಯರ್ ಹರಿನಾಥ್ ಅವರ ಹೇಳಿಕೆಗೆ ಡ್ಯಾಂ ನಿರ್ಮಾಣ ಸಂತ್ರಸ್ತ ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

dam-02

ಬುಧವಾರ ಬೆಳಗ್ಗೆ ಬಂಟ್ವಾಳ ಪತ್ರಕರ್ತರನ್ನು ಭೇಟಿಯಾದ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಂತ್ರಸ್ತ ರೈತರು ಮೇಯರ್ ಹೇಳಿಕೆಯನ್ನು ಆಕ್ಷೇಪಿಸಿದರು. ಮಂಗಳವಾರ ಮೇಯರ್ ಹರಿನಾಥ್ ಅವರು ಸುದ್ದಿಗೋಷ್ಠಿ ನಡೆಸಿ ತುಂಬೆ ಹೊಸ ಡ್ಯಾಂನಲ್ಲಿ ಪ್ರಸ್ತುತ ವರ್ಷ 5 ಮೀಟರ್ ನೀರು ಶೇಖರಣೆ ಮಾಡುವುದರಿಂದ ಸುತ್ತಮುತ್ತಲಿನ ಯಾವುದೇ ಜಮೀನು ಮುಳುಗಡೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆಯಿಂದ ಡ್ಯಾಂನ ಸುತ್ತ ಮುತ್ತಲಿನ ಸಂತ್ರಸ್ತ ರೈತರು ಹಾಗೂ ಹೋರಾಟ ಸಮಿತಿ ಆಕ್ರೋಶಗೊಂಡಿದ್ದು ಈ ಹಿಂದೆ ಮಾಹಿತಿ ಹಕ್ಕಿನಡಿ ಮುಳುಗಡೆ ಪ್ರದೇಶದ ಮಾಹಿತಿ ಕೇಳಿದ ಸಂದರ್ಭದಲ್ಲಿ ಇದೇ ಮನಪಾ 53 ಎಕರೆ ಜಮೀನು ಮುಳುಗಡೆಯಾಗುತ್ತದೆ ಎಂದು ಮಾಹಿತಿ ನೀಡಿತ್ತು. ಆದರೆ ಇದೀಗ ಮೇಯರ್ ಅವರು ಯಾವುದೇ ಜಮೀನು ಮುಳುಗಡೆಯಾಗುವುದಿಲ್ಲ ಎಂದು ಯೂಟರ್ನ್ ಹೊಡೆಯುವ ಮೂಲಕ ಸಂತ್ರಸ್ತರನ್ನು ಮತ್ತೆ ಕತ್ತಲಲ್ಲಿ ಇಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ ಮೂರು ಹಂತದ ಸರ್ವೇ ಕಾರ್ಯ ಈಗಾಗಲೇ ಮುಗಿದು ನಾಲ್ಕನೇ ಹಂತದ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಮೇಯರ್ ಅವರ ಹೇಳಿಕೆ ಹಾಸ್ಯಾಸ್ಪದವಾಗಿದ್ದು ಈಗಾಗಲೇ 7 ಹಂತದಲ್ಲಿ ಸರ್ವೇ ಕಾರ್ಯ ನಡೆದಿದ್ದು ಇದುವರೆಗೂ ಮುಳುಗಡೆ ಪ್ರದೇಶದ ಸ್ಪಷ್ಟ ಮಾಹಿತಿಯನ್ನು ಮನಪಾವಾಗಲಿ, ಜಿಲ್ಲಾಡಳಿತವಾಗಲಿ, ಜೊತೆಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಾ ನೀಡಿರುವುದಿಲ್ಲ. ಸಚಿವರಾದಿಯಾಗಿ ಉನ್ನತ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಹಿತ ಹಲವಾರು ಸಭೆಗಳು ನಡೆದರೂ ಸಂತ್ರಸ್ತ ರೈತರ ಬೇಡಿಕೆಯನ್ನು ಈವರೆಗೂ ಸಾಧ್ಯವಾಗಿಲ್ಲ. ಇದರಿಂದಾಗಿ ರೈತರು 12 ವರ್ಷದಿಂದ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಕಂಗಾಲಾಗಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಭರವಸೆಯ ಮಾತುಗಳಷ್ಟೇ ಸಿಗುತ್ತಿದೆ ವಿನಹ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಮೇಯರ್ ಅವರು ಅರಿತುಕೊಳ್ಳುವುದು ಒಳಿತು ಎಂದು ಹೋರಾಟ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎನ್.ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಹೋರಾಟ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಮುುಳುಗಡೆ ಜಮೀನಿನ ಒಟ್ಟು ಪರಿಹಾರಕ್ಕಾಗಿ 500 ಕೋಟಿ ರೂ. ಬೇಕಾಗಬಹುದು ಎಂದು ತಿಳಿಸಿದ್ದರು. ಆದರೆ ಆ ಸಭೆಯ ನಡಾವಳಿಯ ಬಗ್ಗೆ ಈಗ ಯಾವುದೇ ಪ್ರಸ್ತಾಪ ಇಲ್ಲ. ಮನಪಾ, ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆ ಹಾಗೂ ಜನ ಪ್ರತಿನಿಧಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಾ ಸಂತ್ರಸ್ತ ರೈತರನ್ನು ವಂಚಿಸಲು ಯತ್ನಿಸುತ್ತಿದ್ದಾರೆ ಎಂದು ಹೋರಾಟ ಸಮಿತಿ ಆರೋಪಿಸಿದೆ.

ನ್ಯಾಯಾಲಯದಿಂದ ನೋಟಿಸ್: ಸಧ್ಯ ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿಯು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಹುಸಿ ಭರವಸೆಯನ್ನು ನಂಬಿ ಕೆಟ್ಟ ಸಂತ್ರಸ್ತ ರೈತರು ಇದೀಗ ಇದೀಗ ಕೊನೆಯ ಅಸ್ತ್ರವಾಗಿ ಕಾನೂನು ಹೋರಾಟಕ್ಕೆ ಧುಮುಕ್ಕಿದ್ದು ಈಗಾಗಲೇ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿದೆ. ನ್ಯಾಯಾಲಯ ಹೋರಾಟ ಸಮಿತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಪರಿಗಣಿಸಿ ಜಿಲ್ಲಾಡಳಿತ, ಸಹಾಯಕ ಕಮೀಷನರ್, ಬಂಟ್ವಾಳ ತಹಶೀಲ್ದಾರ್, ವಿಶೇಷ ಭೂ ಸ್ವಾಧೀನ ಅಧಿಕಾರಿ, ಮನಪಾ ಕಮಿಷನರ್, ಕುಂಡ್ಸೆಫ್ ಮುಖ್ಯ ಕಾರ್ಯಪಾಲಕ ಅಭಿಯಂತರ ಸೇರಿದಂತೆ 11 ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಡ್ಯಾಂ ನಿರ್ಮಾಣದಿಂದಾಗಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡದೆ ನೀರು ಶೇಖರಿಸಬಾರದು ಎಂದು ಆದೇಶಿಸಿದಲ್ಲದೆ ಈ ಕುರಿತಂತೆ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *