ಬಂಟ್ವಾಳ: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂಧಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಆಶ್ರಯದಲ್ಲಿ ಶನಿವಾರ ಬಿ.ಸಿ.ರೋಡು ಮೇಲ್ಸೇತುವೆಯ ಕೆಳಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.
ಸಂಜೆ ನಡೆದ ಸತ್ಯಾಗ್ರಹದ ಸಮಾರೋಪ ಭಾಷಣ ಮಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲ ರಂಗದಲ್ಲೂ ವಿಫಲಗೊಂಡಿದ್ದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿ ಜನರ ಹಿತವನ್ನು ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರ ನರ ಸತ್ತ ನಿರ್ಜೀವ ಸರಕಾರ ಎಂದು ವಾಗ್ದಾಳಿ ನಡೆಸಿದರು. 
ಮರಳು, ಮರ, ಗೋವು ಮಾಫಿಯಾದ ರಕ್ಷಣೆಗೆ ನಿಂತಿರುವ ಸರಕಾರಕ್ಕೆ ಅಡಿಕೆ, ರಬ್ಬರ್, ತೆಂಗು ಬೆಳೆಗಾರರ ಸಮಸ್ಯೆಯನ್ನು ಆಲಿಸಲು ಸಚಿವರಾದಿಯಾಗಿ ಸರಕಾರಕ್ಕೆ ಪುರುಸೋತ್ತಿಲ್ಲ. ಕಳೆದ ಆರು ತಿಂಗಳಿನಿಂದ 9/11 ಸಮಸ್ಯೆ ಪರಿಹಾರಕ್ಕೆ ನಮ್ಮ ಜಿಲ್ಲೆಯ ಸಚಿವರುಗಳಿಗೆ ಮನವಿಯ ಮೂಲಕ ಗೋಗೆರದರೂ ಇದನ್ನು ಕಿವಿಗಾಕಿಕೊಳ್ಳದೆ ಈಗ ಅವರು ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಪ್ರತಿಭಟನೆಯಿಂದ ಎಚ್ಚೆತ್ತು ಮುಖ್ಯಮಂತ್ರಿಯ ಬಳಿ ನಿಯೋಗ ಕೊಂಡೊಯ್ಯುವ ನಾಟಕವಾಡಿದ್ದಾರೆ ಎಂದು ಲೇವಡಿ ಮಾಡಿದರು.
ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ಅಭಿವೃದ್ಧಿಗೆ 19 ಕೋಟಿ ರೂಪಾಯಿ ಅನುದಾನ ಮಂಜೂರುಗೊಂಡಿದ್ದು ಬಿ.ಸಿ.ರೋಡಿನಿಂದ ಅಡ್ಡಹೊಳೆ, ಬಿ.ಸಿ.ರೋಡಿನಿಂದ ಪೊಳಲಿಯಾಗಿ ಮುಲ್ಕಿವರೆಗೆ ಮತ್ತು ಬಂಟ್ವಾಳದಿಂದ ಮೂಡಬಿದ್ರೆ, ಕಾರ್ಕಳ ರಸ್ತೆಗೆ 224 ಕೋಟಿ ರೂಪಾಯಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೇಂದ್ರ ಸರಕಾರ ಜಿಲ್ಲೆಗೆ ನೀಡಿದ ಈ ಕೊಡುಗೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಸಾಧನೆಯೆಂದು ಜನರಲ್ಲಿ ಭ್ರಮೆ ಮೂಡಿಸುತ್ತಿದ್ದಾರೆ ಎಂದ ಸಂಸದ ಜಿಲ್ಲೆಗೆ ರಮಾನಾಥ ರೈ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸತ್ಯಾಗ್ರಹದಲ್ಲಿ ಪಾಲ್ಗೊಂಡ ವಿ.ಪ. ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಸಮಿತಿ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಮುಂಖಡ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಮಾಜಿ ಜಿಪಂ ಸದಸ್ಯ ಚನ್ನಪ್ಪ ಕೋಟ್ಯಾನ್ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿ ಸರಕಾರದ ಜನ ವಿರೋಧಿ ನೀತಿ ಹಾಗೂ 9/11ಗೆ ಸಂಬಂಧಿಸಿ ಉಂಟಾಗಿರುವ ಸಮಸ್ಯೆಯ ಬಗ್ಗೆ ವಿವರಿಸಿ ಇದನ್ನು ಪರಿಹರಿಸುವಂತೆ ಆಗ್ರಹಿಸಿದರು.
ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಪ್ರಮುಖರಾದ ಉಮನಾಥ್ ಕೋಟ್ಯಾನ್, ಜಗದೀಶ್ ಅಧಿಕಾರಿ, ವೇದವ್ಯಾಸ್ ಕಾಮತ್, ಸಂಜೀವ ಫ್ರಭು, ರಣದೀಪ್ ಕಾಂಚನ್, ಹರೀಶ್ ಪೂಂಜ, ಸಂಧ್ಯಾ ವೆಂಕಟೇಶ್, ದಿನೇಶ್ ಭಂಡಾರಿ, ವಜ್ರನಾಥ ಕಲ್ಲಡ್ಕ, ರಮಾನಾಥ ರಾಯಿ, ಸೀತಾರಾಮ ಶೆಟ್ಟಿ, ಸದಾನಂದ ಮಲ್ಲಿ, ಮಹಾಬಲ ಶೆಟ್ಟಿ ಪಲ್ಲಮಜಲು, ವೆಂಕಟೇಶ್ ನಾವುಡ, ನೇಮಿರಾಜ ರೈ, ಅಣ್ಣಿ ಪೂಜಾರಿ, ರಮೇಶ್ ಕುಡ್ಮೇರು, ಸಂತೋಷ್ ರಾಯಿಬೆಟ್ಟು, ವಿಜಯ ರೈ, ಹರೀಶ್ ರಾಯಿ, ನಳೀನಿ ಬಿ. ಶೆಟ್ಟಿ, ಕಮಲಾಕ್ಷಿ ಪೂಜಾರಿ, ಗಿರಿಜ ಹಾಗೂ ಬಿಜೆಪಿ ಜಿ.ಪಂ., ತಾ.ಪಂ. ಮತ್ತು ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಮೊದಲಾದವರಿದ್ದರು ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ಕೊನೆಯಲ್ಲಿ ಬಂಟ್ವಾಳ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಳಿಕ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರಿಗೆ ತಂಪು ಪಾನಿಯ ನೀಡುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಯಿತು.
