ಬಂಟ್ವಾಳ: ಅಗಲೀಕರಣಗೊಂಡ ಬಿ.ಸಿ.ರೋಡು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ ಹಾಗೂ ಸಾಮನುಗಳನ್ನು ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲಕರಿಗೆ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಹಾಗೂ ಟ್ರಾಫಿಕ್ ಎಸ್ಸೈ ಚಂದ್ರಶೇಕರಯ್ಯ ಎಚ್ಚರಿಕೆ ನೀಡಿದ ಘಟನೆ ಶನಿವಾರ ಬೆಳಗ್ಗೆ ನಡೆಯಿತು. ನಿತ್ಯ ಟ್ರಾಫಿಕ್ ಜಾಮ್ನಿಂದ ಸಮಸ್ಯೆ ಎದುರಿಸುತ್ತಿದ್ದ ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ವಾಹನಗಳ ಸುಗಮ ಸಂಚಾರಕ್ಕಾಗಿ ಇತ್ತೀಚೆಗೆ ವಿಶೇಷ ಮುತುವರ್ಜಿ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಾಸೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಬಂಟ್ವಾಳ ಟ್ರಾಫಿಕ್ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದ ಅವರು, ಸರ್ವೀಸ್ ರಸ್ತೆಯ ಅಗಲೀಕರಣ ಹಾಗೂ ಡಾಮರೀಕರಣ ಕ್ರಮ ವಹಿಸುವಂತೆ ಸೂಚಿಸಿದ್ದರು.


ಎಸ್ಪಿಯ ಸೂಚನೆಯ ಮೇರೆಗೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಖುದ್ದು ಮುಂದೆ ನಿಂತು ಸರ್ವೀಸ್ ರಸ್ತೆಯ ಅಗಲೀಕರಣಗೊಳಿಸಿ, ಅಗಲೀಕರಣಗೊಂಡ ರಸ್ತೆಗೆ ಜಲ್ಲಿ ಹಾಕಿ ವಾಹನಗಳ ಸುಮಗ ಸಂಚಾರಕ್ಕೆ ಅನುವು ಆಗುವಂತೆ ಕ್ರಮ ಕೈಗೊಂಡಿದ್ದರು. ಆದರೆ ಅಗಲಗೊಂಡ ಸರ್ವೀಸ್ ರಸ್ತೆಯಲ್ಲಿ ಆಟೋ ರಿಕ್ಷಾ, ಕಾರು, ಬೈಕು ಸೇರಿದಂತೆ ಇತರ ಖಾಸಗಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿ ಚಾಲಕರು ತಮ್ಮ ಕೆಲಸ ಕಾರ್ಯಕ್ಕೆ ತೆರಳುತ್ತಿದ್ದರು. ಅಲ್ಲದೆ ರಸ್ತೆಗೆ ತಾಗಿಕೊಂಡಿರುವ ಅಂಗಡಿಗಳ ಮಾಲಕರು ಈ ರಸ್ತೆಯಲ್ಲಿ ಅಂಗಡಿಗಳ ಸಾಮಾನುಗಳನ್ನಿಟ್ಟು ವ್ಯಾಪಾರ ನಡೆಸುತ್ತಿದ್ದರು. ಇದರಿಂದಾಗಿ ರಸ್ತೆ ಅಗಲೀಕರಣಗೊಂಡರೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಗದೆ ಟ್ರಾಫಿಕ್ ಪೊಲೀಸರಿಗೆ ಇನ್ನಷ್ಟು ತಲೆ ನೋವಾಗಿ ಪರಿಣಮಿಸಿತ್ತು. ಈ ಬಗ್ಗೆ ಸಾರ್ವಜನಿಕರಿಂದಲೂ ಪೊಲೀಸ್ ಇಲಾಖೆಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ರಸ್ತೆಗೆ ತಾಗಿಕೊಂಡಿದ್ದ ಅಂಗಡಿ ಮಾಲಕರಿಗೆ ರಸ್ತೆಯಲ್ಲಿ ಸಮಾನುಗಳನ್ನಿಡದಂತೆ ಹಾಗೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವ ವಾಹನಗಳ ಚಾಲಕರಿಗೂ ಹಲವು ಬಾರಿ ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದರು.
ಆದರೆ ಅಂಗಡಿ ಮಾಲಕರು, ಆಟೋ ರಿಕ್ಷಾ ಹಾಗೂ ಇತರ ವಾಹನ ಚಾಲಕರು ಪೊಲೀಸರ ಈ ಯಾವುದೇ ಸೂಚನೆಯನ್ನು ಪಾಲಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂಗಡಿ ಮಾಲಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಇನ್ನು ಮುಂದು ರಸ್ತೆಯಲ್ಲಿ ಸಮಾನುಗಳನ್ನು ಇಟ್ಟಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಅಲ್ಲದೆ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದ್ದ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ದಂಡ ವಸೂಲಿ ಮಾಡಿದರು.
ಕಾರ್ಯಾಚರಣೆಯಲ್ಲಿ ನಗರ ಠಾಣೆ ಎಸ್ಸೈ ನಂದಕುಮಾರ್, ಟ್ರಾಫಿಕ್ ಎಸ್ಸೈಗಳಾದ ಚಂದ್ರಶೇಖರಯ್ಯ, ರತನ್ ಕುಮಾರ್ ಹಾಗೂ ಅವರ ಸಿಬ್ಬಂದಿಗಳು ಪಾಲ್ಗೊಂಡರು.

