ಮೂಡುಬಿದಿರೆ: ಯಕ್ಷಗಾನ ಅದು ಶ್ರೇಷ್ಠ ಕಲೆ. ಪೇಜಾವರ ಶ್ರೀಗಳವರೊಮ್ಮೆ ಹೇಳಿದ್ದಂತೆ ಯಕ್ಷ ಎನ್ನುವುದನ್ನು ತಿರುಗಿ ಬರೆದಾಗ ಕ್ಷಯ ಎಂದಾಗುತ್ತದೆ. ಆದರೆ ಹಾಗಾಗದೇ ಅದಕ್ಕೆ ಅ ಸೇರಿಕೊಂಡು ಅದು ಅಕ್ಷಯವಾಗಬೇಕು. ಇತ್ತೀಚಿನ ಅವಧಿಯಲ್ಲಿ ಯಕ್ಷಗಾನಕ್ಕೆ ಕಲೆಗೆ ಸಂಬಂಧಿಸಿ ಹುಟ್ಟಿಕೊಳ್ಳುತ್ತಲೇ ಇರುವ ಸಂಘಟನೆಗಳನ್ನು ಗಮನಿಸಿದರೆ ಈ ಕಲೆ ಅಕ್ಷಯವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಪಂಚ ಯಕ್ಷಗಾನ ಮೇಳಗಳ ಯಜಮಾನ ಕಿಶನ್ ಹೆಗ್ಡೆ ಹೇಳಿದರು. ಅವರು ರವಿವಾರ ಸಂಜೆ ಇಲ್ಲಿನ ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಯಕ್ಷ ಮೇನಕಾ ಮೂಡುಬಿದಿರೆ ಎನ್ನುವ ನೂತನ ಸಂಘಟನೆಯನ್ನು ನಾಮಕರಣ ಪರದೆಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ತಾಳಮದ್ದಳೆ ಕೂಟಗಳು ಇತ್ತೀಚಿನ ದಿನಗಳಲ್ಲಿ ಅರ್ಥಪೂರ್ಣ ಸಂವಾದಕ್ಕೆ ವೇದಿಕೆಯಾಗುತ್ತಿರುವುದನ್ನು ಅವರು ಶ್ಲಾಘಿಸಿದರು.

ಉದ್ಯಮಿ ಕೆ.ಶ್ರೀಪತಿ ಭಟ್ ಅಧ್ಯಕ್ಷತೆವಹಿಸಿ ಮಾತನಾಡಿ ಯುವಕರು ಯಕ್ಷಗಾನ ತಾಳ ಮದ್ದಳೆಯತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಕರಾವಳಿಯ ಈ ಭಾಗದಲ್ಲಿ ನಿರಂತರ ಪ್ರಯೋಗಶೀಲ ಯಕ್ಷಗಾನ ತಾಳಮದ್ದಳೆ ಚಟುವಟಿಕೆಗಳು ಮತ್ತು ಅವುಗಳಿಗೆಲ್ಲ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿರುವುದು ಗಮನಾರ್ಹ ಎಂದರು. ಮುಖ್ಯ ಅತಿಥಿ ಶಿವಮೊಗ್ಗದ ಕೆನರಾ ಬ್ಯಾಂಕ್ ಅಧಿಕಾರಿ, ಯಕ್ಷಗಾನ ಕಲಾವಿದ ಗೋವಿಂದರಾಯ ನಾಯಕ್ ಮಾತನಾಡಿ ಅಜ್ಜಿಕತೆಯ ಸಂಸ್ಕøತಿ ಮಾಯವಾಗಿರುವ ಈ ದಿನಗಳಲ್ಲಿ ಯಕ್ಷಗಾನದ ಸುಂದರ ಕಲೆಯ ಮೂಲಕ ಸಂವಾದ, ಪಾತ್ರನಿರ್ವಹಣೆ, ಅನುಕರಣೆ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಯಕ್ಷಗಾನವನ್ನು ಬಳಸಿಕೊಳ್ಳಬೇಕಾಗಿದೆ ಎಂದರು. ಮೂಡುಬಿದಿರೆ ನಾಗಲಿಂಗ ಸಂಸ್ಕøತ ಪಾಠಶಾಲೆಯ ಮುಖ್ಯ ಶಿಕ್ಷಕ ಜಯಕರ ಪುರೋಹಿತ್ ಶುಭ ಹಾರೈಸಿದರು. ಯಕ್ಷ ಮೇನಕಾದ ಗೌರವಾಧ್ಯಕ್ಷ ಎಂ.ಪಿ. ಅಶೋಕ್ ಕಾಮತ್ ಉಪಸ್ಥಿತರಿದ್ದರು.
ಯಕ್ಷ ಮೇನಕಾದ ಕಾರ್ಯಾಧ್ಯಕ್ಷ ಸದಾಶಿವ ರಾವ್ ನೆಲ್ಲಿಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಲಾ ಸೇವೆಗೆ ಸಾಂಸ್ಥಿಕ ರೂಪವಾಗಿ ಯಕ್ಷ ಮೇನಕಾ ಮುನ್ನಡೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ಅಶಕ್ತ ಕಲಾವಿದ ಶಿರಂಕಲ್ಲು ರಾಮಕೃಷ್ಣ ಭಟ್ ಅವರಿಗೆ ಯಕ್ಷ ಕಲಾವಿದ ಸಹಾಯವನ್ನು ನೀಡಿ ಗೌರವಿಸಲಾಯಿತು. ಶಿವದತ್ತ ಭಟ್ ಕಾರ್ಯಕ್ರಮ ನಿರ್ವಹಿಸಿ ನಾಗರಾಜ ಆಚಾರ್ಯ ವಂದಿಸಿದರು.
ಸಮಾರಂಭಕ್ಕೂ ಮೊದಲು ಕಾಸರಗೋಡಿನ ಶೇಣಿ ರಂಗ ಜಂಗಮ ಟ್ರಸ್ಟ್ ಸಹಭಾಗಿತ್ವದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಜನ್ಮಶತಮಾನೋತ್ಸವ-2018 ವಿಶೇಷ ಸರಣಿ ತಾಳಮದ್ದಳೆ ಕೂಟ ಪಾರ್ಥ ಸಾರಥ್ಯ, ಉಜಿರೆ ಅಶೋಕ ಭಟ್ ಅವರಿಂದ ಶೇಣಿ ಸಂಸ್ಮರಣೆ ಬಳಿಕ ದಕ್ಷಾಧ್ವರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
—-
ಯಕ್ಷಗಾನದ ಹುಚ್ಚು ಎನ್ನಬೇಡಿ!
ಯಕ್ಷಗಾನಪ್ರಿಯರನ್ನು ‘ಆಟದ ಮರ್ಲ್’ ಯಕ್ಷಗಾನದ ಹುಚ್ಚರು ಎನ್ನವುದು ರೂಢಿಯಲ್ಲಿದೆ. ಯಕ್ಷಗಾನ ಪುರಾಣ ಕಾವ್ಯಗಳನ್ನು ನಮ್ಮೆದುರು ತೆರೆದಿಡುವ ಶ್ರೇಷ್ಠ ಕಲೆ. ಹಾಗಾಗಿ ಯಕ್ಷಗಾನದ ಹುಚ್ಚು ಎನ್ನುವ ಬದಲು ಆಸಕ್ತಿ ಎಂದು ಕರೆಯಿರಿ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಬಗ್ಗೆ ಹಿಂದೆ ಮಕ್ಕಳಿಗೆ ಶಾಲೆಗಳಲ್ಲಿ ಹೇಳಿಕೊಡುವ ಕ್ರಮವಿತ್ತು. ಈಗ ಅದೂ ಮಾಯವಾಗಿದೆ. ಈಗ ಅದು ಉಳಿದಿರುವುದು ಯಕ್ಷಗಾನ ಕಲೆಯ ಮೂಲಕ ಮಾತ್ರ. ಹಾಗಾಗಿ ಎಳೆಯರನ್ನೂ ಯಕ್ಷಗಾನದತ್ತ ಸೆಳೆದು ಅವರಿಗೆ ಉತ್ತಮ ಸಂಸ್ಕಾರ ಸಿಗುವಂತೆ ಮಾಡಿ. ಧಾರ್ಮಿಕ ಸಂಸ್ಥೆಗಳು ಯಕ್ಷಗಾನವನ್ನು ಪ್ರೋತ್ಸಾಹಿಸಿದಾಗ ಈ ಕಲೆ ಇನ್ನಷ್ಟು ಅರ್ಥಪೂರ್ಣವಾಗಿ ಬೆಳೆಯುತ್ತದೆ ಎಂದು ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ತಮ್ಮ ಶುಭಾಶಂಸನೆಯಲ್ಲಿ ಹೇಳಿದರು.
—

