ಬಂಟ್ವಾಳ, : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ವತಿಯಿಂದ ಬಂಟ್ವಾಳ ತಾಲೂಕಿನ ಶಾಲಾ-ಕಾಲೇಜಿಗಳಿಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವ ಶಾಲಾ ಹಾಗೂ ಖಾಸಗಿ ವಾಹನಗಳ ತಪಾಸಣಾ ಕಾರ್ಯ ಇಲ್ಲಿನ ಮೊಡಂಕಾಪು ಇನ್ಫಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ರವಿವಾರ ನಡೆಯಿತು.
ತಪಾಸಣಾ ಕಾರ್ಯಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ, ಶಾಲಾ ಕಾಲೇಜಿಗಳಿಗೆ ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳ ಚಾಲಕರು ಅತೀ ಜಾಗೂರಕತೆಯಿಂದ ತಮ್ಮ ವಾಹನ ಚಲಾಯಿಸಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ಹಾಗೂ ಬರುವ ಸಂದರ್ಭದಲ್ಲಿ ಅವಗಡಗಳು ಸಂಭವಿಸುವ ಅಪಾಯ ಹೆಚ್ಚಿರುವುದರಿಂದ ವಾಹನ ಚಾಲಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಚಾಲನೆಯಲ್ಲಿ ಪೈಪೋಟಿ, ಅವಸರ ಮಾಡದೇ ವೇಗ ಮಿತಿಯಲ್ಲಿ ವಾಹನ ಓಡಿಸಬೇಕು ಎಂದು ಹೇಳಿದರು.

ಶಾಲಾ ಮಕ್ಕಳನ್ನು ಕರೆದೊಯ್ಯುವ ಓಮ್ನಿ, ಆಟೋ ರಿಕ್ಷಾ ಮತ್ತು ಮ್ಯಾಕ್ಸಿ ಕ್ಯಾಬ್ಗಳ ಮುಂದಿನ ಹಾಗೂ ಹಿಂದಿನ ಗಾಜುಗಳಿಗೆ ಅಂಟಿಸಿರುವ ಸ್ಟಿಕರ್ಗಳನ್ನು ಕಡ್ಡಾಯವಾಗಿ ತೆಗೆಯಬೇಕು. ಎಲ್ಲ ವಾಹನಗಳಲ್ಲಿ ಚಾಲಕರಿಗೆ ಹಾಗೂ ಮಕ್ಕಳಿಗೆ ಸೀಟ್ ಬೆಲ್ಟ್ ಧರಿಸುವ ವ್ಯವಸ್ಥೆ ಮಾಡಬೇಕು. ವಾಹನ ತಿರುವು ಪಡೆಯುವ ಸಂದರ್ಭದಲ್ಲಿ ಇಂಡಿಕೇಟರ್ ಹಾಕುವುದರೊಂದಿಗೆ ಹಾಂಡ್ ಸಿಗ್ನಲ್ಗಳನ್ನು ನೀಡಬೇಕು. ಓಮ್ನಿ ಕಾರು ಮತ್ತು ರಿಕ್ಷಾದ ಒಳ ಭಾಗದಲ್ಲಿ ಗಾಜಿಗೆ ಅಳವಡಿಸಿರುವ ಪರದೆಗಳನ್ನು ತೆಗೆಯಬೇಕು. ಎಲ್ಲ ವಾಹನಗಳ ಚಾಲಕರು ಚಾಲನಾ ಪರವಾನಿಗೆಯೊಂದಿಗೆ ಕಡ್ಡಾಯವಾಗಿ ಬ್ಯಾಜ್ ಹೊಂದಿರಬೇಕು. 15 ವರ್ಷದ ಹಳೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಎಲ್ಲ ವಾಹನಗಳ ಚಾಲಕರು ಇನ್ಸೂರೆನ್ಸ್ ಮಾಡಿಸಬೇಕು. ಇನ್ಸೂರೆನ್ಸ್ ಸಹಿತಿ ವಾಹನಗಳ ಎಲ್ಲ ದಾಖಲೆ ಪತ್ರಗಳನ್ನು ಕ್ರಮ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ 40 ಕಿಲೋ ಮೀಟರ್ಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಓಡಿಸಬಾರದು. ವಾಹನಗಳ ಟಯರ್ಗಳು ಸವೆದಾಗ ಹೊಸ ಟಯರ್ ಹಾಕಿ. ಯಾವುದೇ ಕಾರಣಕ್ಕೂ ತುಂಬಾ ಹಳೆ ಟಯರ್ಗಳನ್ನು ಬಳಸಬೇಡಿ. ದಿನನಿತ್ಯ ಬೆಳಗ್ಗೆ ವಾಹನವನ್ನು ಓಡಿಸುವ ಮುನ್ನ ಇಡೀ ವಾಹನವನ್ನೊಮ್ಮೆ ಸಂಪೂರ್ಣವಾಗಿ ತಪಾಸಣೆ ಮಾಡಿ ಎಂದು ಅವರು ಶಾಲಾ ಹಾಗೂ ಖಾಸಗಿ ವಾಹನಗಳ ಚಾಲಕ, ಮಾಲಕರಿಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷ ಮಂಜಯ್ಯ, ಗ್ರಾಮಾಂತರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ, ಟ್ರಾಫಿಕ್ ಠಾಣೆ ಎಸ್ಸೈ ರತನ್ ಕುಮಾರ್, ಹಿರಿಯ ಮೋಟರ್ ವಾಹನ ನಿರೀಕ್ಷಕ ಜ್ವಾಯಿ, ಅಶ್ವನ್, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ರವಿಕುಮಾರ್ ಉಪಸ್ಥಿತರಿದ್ದರು. ಟ್ರಾಫಿಕ್ ಠಾಣೆ ಎಸ್ಸೈ ಚಂದ್ರಶೇಖರಯ್ಯ ಸ್ವಾಗತಿಸಿ ವಂದಿಸಿದರು.




