ಬಂಟ್ವಾಳ: ಸುಮಾರು 15 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಮಂಚಿ-ಕೊಳ್ನಾಡು ಎಂಬ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳ ಕಲಾವಿದರನ್ನು ಒಗ್ಗೂಡಿಸಿ ಪ್ರಾರಂಭಿಸಿದ ಕಲಾ ಸಂಸ್ಥೆ ಬೊಲ್ಪು ಕಲಾ ತಂಡವು ಇದೀಗ 15ರ ಹರೆಯದ ಸಂಭ್ರಮದಲ್ಲಿ “ಬೊಲ್ಪು ಕ್ರೀಯೇಶನ್ಸ್” ಬ್ಯಾನರ್ನಡಿ “ಪಾಪದಾ ಪಿರವು” ಎಂಬ ತುಳುನಾಡಿನ ಗತಿಸಿದ ಇತಿಹಾಸದ ಧಾರ್ಮಿಕ ಸಾಂಸ್ಕೃತಿಕ ಕೃಷಿ ಸಂಪತ್ತು ಹಾಗೂ ಸಮಾನತೆಯ ಪ್ರತೀಕಗಳನ್ನು ಬಿಂಬಿಸುವಂತಹ ಧಾರಾವಾಹಿಯೊಂದನ್ನು ನಿರ್ಮಿಸುತ್ತಿದ್ದು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ಯೋಜನೆಯನ್ನು ಹಾಕಿಕೊಂಡಿದೆ ಎಂದು ಸಂಸ್ಥೆಯ ಸಂಚಾಲಕ, ದಾರಾವಾಹಿ ನಿರ್ಧೇಶಕ ಕೊರಗಪ್ಪ ಶಿಂಗಾರಕೋಡಿ ತಿಳಿಸಿದರು.
ದಾರಾವಾಹಿನಿಯ ಚಿತ್ರೀಕರಣ ನಡೆಯುತ್ತಿರುವ ಪೆರ್ನೆಯ ಹಳೆಯ ಗುತ್ತಿನ ಮನೆಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ವಿವರ ನೀಡಿದರು.

ಕಳೆದ 15ವರ್ಷಗಳಲ್ಲಿ ಬೊಲ್ಪು ಕಲಾತಮಡವು ತುಳುನಾಡಿನಲ್ಲಿ ನಶಿಸುತ್ತಿರುವ ಕಂಗೀಲು, ಆಟಿಕಳಂಜ, ಮಾದಿರ, ಸುಗ್ಗಿಕುಣಿತ ಮೊದಲಾದ ಕಲಾ ಪ್ರಾಕಾರಗಳನ್ನು ಪ್ರದರ್ಶಿಸುತ್ತಾ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದೆ. ಇದೀಗ ತುಳುನಾಡಿನ ಗ್ರಾಮೀಣ ಬದುಕಿನ ಸೊಗಡನ್ನು ಪ್ರತಿಬಿಂಬಿಸುವ ದಾರಾವಾಹಿಯನ್ನು ನಿರ್ಮಿಸುತ್ತಿದೆ.
ಸುಮಾರು 50 ವರ್ಷಗಳ ಹಿಂದೆ ತುಳುನಾಡಿನಲ್ಲಿದ್ದಂತ ಜಮೀನ್ದಾರಿಕೆ ಕಾಲದಲ್ಲಿನ, ದಬ್ಬಾಳಿಕೆ, ಶೋಷಣೆ ಸರ್ವಧರ್ಮದ ಜನರು ಕೂಡಿ ಬಾಳಿ ಮೆರದ ಸಮಾನತೆಯ ಜೊತೆಗೆ ಅವಿದ್ಯಾವಂತರೇ ಹೆಚ್ಚಾಗಿದ್ದ ಕಾಲದಲ್ಲಿ ತಮ್ಮ ಮಾನವೀಯ ಬದುಕಿಗಾಗಿ ನಡೆಸಿದ ಹೋರಾಟ ಕಂಡ ಯಶಸ್ವಿ ಬದುಕು ತುಳುನಾಡಿನ ಮಣ್ಣಿನೊಂದಿಗೆ ತಾವಿಟ್ಟುಕೊಂಡತಹ ಆವಿನಾ ಭಾವ ಸಂಭದಗಳೆಲ್ಲವೂ ರೂಪುಗೊಂಡಿದೆ. ಅಲ್ಲದೆ ಇಲ್ಲಿ ಉಳುಮೆ, ಕೊಯ್ಲು ಮೊದಲಾದ ಸಂದರ್ಭಗಳಲ್ಲಿ ತಮ್ಮ ದೈನಂದಿನ ದಣಿವನ್ನು ನಿವಾರಿಸಲು ತಾವೇ ಕಟ್ಟಿಕೊಂಡ, ಓಬೇಲೆ ಶೋಭಾನೆ ಹಾಡುಗಳು, ಪಾಡ್ದನಗಳು ಈ ಧಾರಾವಾಹಿಯಲ್ಲಿ ರೂಪುಗೊಂಡಿದೆ. ಅಲ್ಲದೆ ತಾವು ದುಡಿದು ಉಣ್ಣುತ್ತಿದ್ದ ಕೃಷಿ ಭೂಮಿಯನ್ನು ದೇವರೆಂದು ಪೂಜಿಸಿ ಅದಕ್ಕಾಗಿಯೇ ರೂಪಿಸಿಕೊಂಡ ನಾಗ ತಂಬಿಲ ಭೂಮಿಗೆ ಹಾಲೆರೆಯುವುದು, ಬಾಳೆ ಹಾಕುವುದು, ಜೊತೆಗೆ ತಮ್ಮ ಭೂಮಿಯಲ್ಲೆ ಬೆಳೆದಿರುವಂತಹ ಹಲವು ಬಗೆ ಸಮಿತ್ತುಗಳಿಂದ, ಪ್ರಕೃತಿ ಜೊತೆ ಅಡಕವಾಗಿರುವ ಔಷಧ ಗುಣವುಳ್ಳ ವಸ್ತುಗಳನ್ನು ಶೇಖರಿಸಿ ಮನೆ ತುಂಬಿಸುವುದು, ಮಳೆಗಾಲದಲ್ಲಿ ಜನರ ಭಯವನ್ನು ಹೋಗಲಾಡಿಸಲು ಆಟಿಕೆಳಂಜವನ್ನು ಸೃಷ್ಟಿಸಿ ಮನೆ ಮನೆ ತಿರುಗಿ ತಮ್ಮ ಹೊಟ್ಟೆಯ ಹಸಿವನ್ನು ನೀಗಿಸುತ್ತಿದ್ದ ಆ ಸಂದರ್ಭಗಳು ಸುಗ್ಗಿಯಲ್ಲಿ ಬರುವ ಮಾದಿರ, ತುಳುನಾಡಿನ ದೈವಾರಾಧನೆ-ಸಂಪ್ರದಾಯ ಇವೆಲ್ಲವುಗಳ ಸಮಾಗವೇ “ಪಾಪದಾ ಪಿರವು” ಯಾವುದೇ ಆಧುನಿಕತೆಯನ್ನು ಬಳಸಿಕೊಳ್ಳದೆ 50 ವರ್ಷಗಳ ಹಿಂದಿನ ತುಳುನಾಡಿನ ಸಂಪ್ರದಾಯ ಆಚರಣೆಗಳನ್ನು ಮುಂದಿನ ಯುವಪೀಳಿಗೆಗೆ ಪರಿಚಯಿಸು ಒಂದು ಪ್ರಯತ್ನ ಈ ಧಾರಾವಾಹಿಯಲ್ಲಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಕೊರಗಪ್ಪ ಶಿಂಗಾರಕೋಡಿ ಇವರು ರಚಿಸಿ ಕತೆ ಸಂಭಾಷಣೆ ಬರೆದು ನಿರ್ದೇಶನ ನೀಡಿರುತ್ತಾರೆ ವಿಶ್ವನಾಥ ದೋಣಿಗದ್ದೆ ಇವರು ಸಹ ನಿರ್ಧೇಶಕರಾಗಿದ್ದಾರೆ. ದಿವಾಕರ ಬಾಳೆಪುಣಿ ಛಾಯಗ್ರಾಹಣ ಮಾಡುತ್ತಿದ್ದಾರೆ. ಧಾರಾವಾಹಿಯ ನೈಜತೆಗಾಗಿ ಎಲ್ಲಾ ಹೆಚ್ಚಾಗಿ ಗ್ರಾಮೀಣ ಕಲಾವಿದರನ್ನೆ ಆಯ್ಕೆ ಮಾಡಲಾಗಿದೆ. ದೇವದಾಸ ಅಡಪ, ಪುಷ್ಪರಾಜ ಕುಕ್ಕಾಜೆ, ಪದ್ಮನಾಭ ಸಾಲ್ಯಾನ್, ರಾಜೇಶ್ ಬಾಳಿಕೆ, ಕಡಬ ದಿನೇಶ್ ರೈ, ವಿಕ್ಟರ್ ಪಾಯಸ್, ಯಶೋಧ ಬಿ. ಶೆಟ್ಟಿ, ಪ್ರತಿಮಾ ಜಿ. ಅಂಚನ್, ಆನಂದ, ಉದಯ ಕುಮಾರ್ ಲಾಲ, ಜಯಂತ್ ನೇರಂಬೋಳು, ಮೋಹನದಾಸ ಕೊಟ್ಟಾರಿ, ಸುನಿಲ ಜಾರುಂದ ಗುಡ್ಡೆ, ವಿಜಯ್ ಮಾರಿಪಳ್ಳ, ಮೀನಾಕ್ಷಿ ಕಡೆಶ್ವಾಲ್ಯ, ಶಶಿಧರ್ ಕೆ., ವಾಸಪ್ಪ, ವಿಶ್ವನಾಥ್ ಕಲ್ಲಡ್ಕ, ನೋಣಯ್ಯ, ಹೊನ್ನಯ್ಯ ಅಮೀನ್, ಶಿವಶಂಕರ್ ಮಂಚಿ, ನಾರಾಯಣ ಪೆರ್ನೆ , ಯಾಧವ ಕುರಿಯಾಡಿ, ಮಾ| ಪ್ರಜ್ವಲ್, ಕು| ಹರ್ಷಿತಾ ಮಾದಲಾದವರು ನಟಿಸಲಿದ್ದಾರೆ.
ಜೂನ್ 2ರಿಂದ ಪ್ರಾರಂಭಗೊಂಡ ಚಿತ್ರೀಕರಣವು ಮಂಚಿ, ಸಾಲೆತ್ತೂರು, ನೂಜಿ ಮೊದಲಾದ ಕಡೆ ಹಲವು ಸ್ಥಳಗಳಲ್ಲಿ ಚಿತ್ರೀಕರಣವನ್ನು ಮುಗಿಸಿ ಇದೀಗ ತಾ. 13-06-2014ರಿಂದ ಪೆರ್ನೆಯ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ. ರಮನಾಥ ರೈಯವರ ಹುಟ್ಟಿನ ಮನೆಯಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಇಲ್ಲಿ ಸುಮಾರು 10 ದಿನಗಳ ಚಿತ್ರೀಕರಣವು ನಡೆಯಲಿದ್ದು, ಆ ಬಳಿಕ ಆಗಸ್ಟ್ ಮೊದಲನೇ ವಾರದಲ್ಲಿ ಒಟ್ಟು 10 ಕಂತುಗಳಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಶಿವ ಆರ್ಟ್ಸ್ ಮಂಚಿ ಇವರು ಪ್ರಸಾಧನ ಕಾರ್ಯವನ್ನು ಮಾಡುತ್ತಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಧಾರಾವಾಹಿ ನಿರ್ದೇಶಕ ಕೊರಗಪ್ಪ ಶಿಂಗಾರಕೋಡಿ, ಬೊಲ್ಪು ಕಲಾ ತಂಡದ ಅಧ್ಯಕ್ಷ ಅಶೋಕ, ವಿಟ್ಟರ್ ಪಾಯಸ್, ದಿನೇಶ್ ರೈ ಕಡಬ, ಗೋಪಾಲ ಕಾಡುಮಠ, ನಾರಾಯಣ ಪೆರ್ನೆ, ಯಶೋಧ ಶೆಟ್ಟಿ, ಶಿವಶಂಕರ್ ರಾವ್, ಛಾಯಗ್ರಾಹಕ ದಿವಾಕರ್ ಬಾಳೆಪುಣೆ, ಸಂಚಿಕೆ ನಿರ್ದೇಶನ ವಿಶ್ವನಾಥ ದೋಣಿಗದ್ದೆ, ಸುಂದರ ಪೂಜಾರಿ ಪೆರ್ನೆ -ಪದಬರಿ ಮೊದಲಾದವರು ಉಪಸ್ಥಿತರಿದ್ದರು.






