ಕಲ್ಲಡ್ಕ: ವೀರಕಂಭ: ಮಾನವನಿಗೆ ಭಕ್ತಿ ಶ್ರದ್ಧೆ , ನಂಬಿಕೆಯ ಜೊತೆಗೆ ಪ್ರಯತ್ನವು ಇರಬೇಕು. ಆಗ ಮಾತ್ರವೇ ಉತ್ತಮ ಜೀವನ ನಡೆಸಲು ಸಾಧ್ಯ ಈ ಸಮಾಜದಲ್ಲಿ ಎಲ್ಲಿಯವರೆಗೆ ತ್ಯಾಗ ಹಾಗೂ ನಿಸ್ವಾರ್ಥ ಸೇವೆ ಇರುವುದೋ ಅಲ್ಲಿಯವರೆಗೆ ಭರತ ದೇಶವು ಸುಭಿಕ್ಷವಾಗಿ ಇರುತ್ತದೆ. ಪ್ರತಿಯೊಬ್ಬನು ತನ್ನ ಧರ್ಮದಲ್ಲಿ ಜೀವಿಸುವುದರ ಮೂಲಕ ಪರಧರ್ಮವನ್ನು ಗೌರವಿಸಿದಾಗ ಮಾತ್ರವೇ ಸಮರಸದ ಬಾಳ್ವೆ ಸಾಧ್ಯ. ಪ್ರತೀ ಮಗುವಿಗೂ ತನ್ನ ಮಾತೃಭಾಷೆ ಸಂಸ್ಕೃತಿ ಆಚಾರವಿಚಾರಗಳನ್ನು ಬಾಲ್ಯದಲ್ಲಿಯೇ ಕಲಿಸಿದಾಗ ಅದು ಬೆಳೆಯುತ್ತದೆ. ಪರರ ಆಕರ್ಷಣೆಗೆ ಒಳಗಾಗದಂತೆ ನಾವೇ ರಕ್ಷಿಸಬೇಕು. ತಾಯಿಯೇ ಅದ್ಭುತವಾದ ವಿಜ್ಞಾನಿ. ಆಕೆಯೇ ಸೃಷ್ಟಿಯ ಮೂಲವೆಂದು ಕಾನೂನು ಸಲಹೆಗಾರರಾದ ಶ್ರೀಮತಿ ಆಶಾ ಪ್ರಸಾದ್ ರವರು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಶ್ರೀ ಶಾರದಾ ಭಜನಾ ಮಂದಿರ ವೀರಕಂಭ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವೀರಕಂಭ ಇದರ ವತಿಯಿಂದ ಶಾರದಾ ಭಜನಾ ಮಂದಿರ ವೀರಕಂಭ ದಲ್ಲಿ ನಡೆದ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ರಕ್ಷಾ ಬಂಧನೋತ್ಸವ ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀಮತಿ ಜಯಂತಿ ಜನಾರ್ಧನರವರು ವಹಿಸಿದ್ದರು. ಸೂರ್ಯನಾರಾಯಣ ಭಟ್ ಕಶೆಕೋಡಿ ಇವರ ಪೌರೋಹಿತ್ಯ ದಲ್ಲಿ ಈ ಕಾರ್ಯಕ್ರಮ ಜರುಗಿತು. ಶ್ರೀಮತಿ ಪ್ರೇಮ ನಾಗೇಶ ಆಚಾರ್ಯ ಸ್ವಾಗತಿಸಿ , ಶ್ರೀಮತಿ ಜಯಂತಿ ಯವರು ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.
