ಮಂಗಳೂರ\ಬಂಟ್ವಾಳ: ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಮಂಗಳೂರಿನ ಪುರಭವನದ ಸಮೀಪ ಬೃಹತ್ ಪ್ರತಿಭಟನೆ ಸೋಮವಾರ ಬೆಳಿಗ್ಗೆ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಾಲಾಭಿವೃದ್ದಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವೊಂದು ಶಾಲೆಗಳಲ್ಲಿ ಒರ್ವನೇ ಅಧ್ಯಾಪಕ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಇದೇ ರೀತಿ ಮುಮದುವರಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಇದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಜಿಲ್ಲಾ ಕೇಂದ್ರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಅನಿವಾರ್ಯತೆ ಬಂದಿದೆ. ತರಗತಿವಾರು ಹಾಗೂ ವಿಷಯವಾರು ಶಿಕ್ಷಕರನ್ನು ತಕ್ಷಣ ಒದಗಿಸಬೇಕು, ಹೆಚ್ಚುವರಿ ಶಿಕ್ಷಕರ ಗುರುತಿಸಿ ವರ್ಗಾಯಿಸುವ ಪ್ರಕ್ರಿಯೆಯನ್ನು ತಕ್ಷಣ ಸರಕಾರ ಕೈ ಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ನಡೆಸುವುದಾಗಿ ಎಚ್ಚರಿಸಿದರು.

ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಕಲಿತವರಿಗೆ ಸರ್ಕಾರಿ ನೌಕರಿ ಸಿಗುವ ಕಾನೂನನ್ನು ಸರ್ಕಾರ ಜಾರಿಗೊಳಿಸಬೇಕು. ಶಿಕ್ಷಕರೇ ಶಾಲೆಯಲ್ಲಿ ಇರದಿದ್ದರೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನು? ಎಂದು ಪ್ರಶ್ನಿಸಿದ ಅವರು ದುರ್ಗಾಫ್ರೆಂಡ್ಸ್ ಕ್ಲಬ್‍ನ ಕಾರ್ಯ ಶ್ಲಾಘನೀಯ ಎಂದರು. ಕ್ಲಬ್‍ನ ಮಾಧ್ಯಮ ಸಲಹೆಗಾರ ಸಂದೀಪ್ ಸಾಲ್ಯಾನ್ ಮಾತನಾಡಿ ಸರ್ಕಾರಿ ಶಾಲೆಯನ್ನು ಉಳಿಸುವಂತೆ ಸರಕಾರವನ್ನೇ ಬೇಡುವ ಸ್ಥಿತಿ ಬಂದಿರುವುದು ವಿಪರ್ಯಾಸ. ಶಾಲೆಗಳಿಗೆ ಪೂರ್ಣಪ್ರಮಾಣದಲ್ಲಿ ತರಗತಿವಾರು ಶಿಕ್ಷಕರನ್ನು ನೀಡದಿದ್ದರೆ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು. ಶಿಕ್ಷಣಪ್ರೇಮಿ ಅಶೋಕ್ ಭಟ್ ಹಾಗೂ ಎಸ್‍ಡಿಎಂಸಿ ಸದಸ್ಯರ ಪರವಾಗಿ ರಾಜೇಶ್‍ಕೊಟ್ಟಾರಿ ಕಲ್ಲಡ್ಕ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆಗಳ ಮನವಿ ಹಾಗೂ ವಿವಿಧ ಶಾಲೆಗಳ ಎಸ್‍ಡಿಎಂಸಿ ನಿರ್ಣಯ ಕೈಗೊಂಡ ಬೇಡಿಗಳ ಮನವಿಯನ್ನು ಸಾಮಾಹಿಕವಾಗಿ ಅಪರ ಜಿಲಾಧಿಕಾರಿಯವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಇದೇ ವೇಳೆ ಮಂಗಳೂರಿನ ಬಲ್ಮಠದಲ್ಲಿರುವ ಸರಕಾರಿ ಶಿಕ್ಷಕರ ಶಿಕ್ಷಣ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವುದನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಲ್ಲಿನ ವಿದ್ಯಾರ್ಥಿನಿಯರು ಪ್ರತ್ಯೇಕ ಮನವಿ ಅರ್ಪಿಸಿದರು.
ಚಿತ್ರ: 1ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳೂರಿನ ಪುರಸಭವನ ಬಳಿ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
2: ಹಿರಿಯ ಸಾಹಿತಿ ಡಾ.ಏರ್ಯಲಕ್ಷ್ಮೀನಾರಾಯಣ ಆಳ್ವ ಮಾತನಾಡಿದರು.

