ಬಂಟ್ವಾಳ: ನಮ್ಮ ಸುತ್ತಮುತ್ತಲಿರುವ ನಿಸರ್ಗದತ್ತವಾದ ಔಷಧೀಯ ಸಸ್ಯಗಳನ್ನು ಹಾಗೂ ಆಹಾರ ಪದ್ದತಿಯನ್ನು ಮುಂದಿನ ತಲೆಮಾರಿಗೂ ತಿಳಿಸಿಕೊಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಟಿದ ಕೂಟದ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ತಿಳಿಸಿದರು. ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಆಟಿಕೂಟವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಹಿರಿಯರು ಬಳಸುತ್ತಿದ್ದ ಸೊಪ್ಪು ತರಕಾರಿಗಳು ಕೇವಲ ಆಹಾರವಾಗಿರದೆ ಔಷಧೀಯ ಗುಣಗಳನ್ನು ಹೊಂದಿದ್ದವು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ ಎಂದರು. ಶಿಕ್ಷಣ ಇಲಾಖೆಯಲ್ಲೂ ಅಧಿಕಾರಿಗಳು ಇಂತಹ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.

ಪತ್ರಕರ್ತ ಗೋಪಾಲಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ತುಳಿನಾಡಿನ ಆಟಿ ಹಬ್ಬ, ಆಚರಣೆ, ಸಂಪ್ರದಾಯ, ಸಂಸ್ಕೃತಿ ಅಲ್ಲ. ಬದಲಾಗಿ ಅದೊಂದು ಜೀವನ ಪದ್ದತಿ. ಹಿಂದಿನ ಕಾಲದ ಜನರು ತಮ್ಮ ಸಮಸ್ಯೆ, ಸವಾಲುಗಳನ್ನು ಪರಿಹರಿಸಿಕೊಳ್ಳಲು ಕಂಡುಕೊಂಡ ಜೀವನ ವಿಧಾನ ಎಂದು ತಿಳಿಸಿದರು. ಬೇಸಾಯ ದೂರ ಆಗುತ್ತಿದ್ದಂತೆಯೇ ಆಟಿಯೂ ದೂರ ಆಗುತ್ತಿದೆ. ಈ ಕಾರಣಕ್ಕಾಗಿ ಇಂದು ಆಟಿ ಆಚರಣೆಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು. ಪ್ರಕೃತಿ ಸಹಜವಾದ ಆಹಾರ ಪದ್ದತಿಗಳನ್ನು ಹಾಗೂ ದೇಸಿ ಜೀವನಪದ್ದತಿಯನ್ನು ಉಳಿಸುವ ನಿಟ್ಟಿನಲ್ಲಿ ಆಟಿಯನ್ನು ಸಾಮಾಹಿಕವಾಗಿ ಆಚರಿಸುವುದು ಇಂದಿಗೂ ಪ್ರಸ್ತುತ ಎಂದ ಅವರು ಆಟಿ ತಿಂಗಳು ಅಶುಭ, ಅಪಶಕುನ, ಅಶುದ್ದ ತಿಂಗಳು ಎನ್ನುವ ಕಲ್ಪನೆ ಸಮಂಜಸವಲ್ಲ. ಬದಲಿಗೆ ಅದೊಂದು ಬರಗಾಲ, ನಿಸರ್ಗದ ಜೊತೆಗೆ ಮನುಷ್ಯ ಬದುಕಿದ ಕಾಲ ಎಂದು ವಿಶ್ಲೇಷಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆಟಿ ಕೂಟದ ಮೂಲಕ ಔಷಧೀಯ ಗುಣಗಳುಳ್ಳ ಸೊಪ್ಪುಗಳಿಂದ ಮಾಡಿದ ಆಹಾರದ ಮಹತ್ವವನ್ನು ವಿದ್ಯಾರ್ಥಿಗಳ ಮೂಲಕ ಪ್ರತಿಯೊಬ್ಬರ ಮನೆಗಳಿಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಆಟಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸರ್ವಶಿಕ್ಷಾ ಅಭಿಯಾನದ ಅಧಿಕಾರಿ ಗೀತಾ, ಡಯೆಟ್ ಉಪನ್ಯಾಸಕರಾದ ಸುಮಂಗಲ, ಚಂದ್ರಾವತಿ, ಜೇಮ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ರಾಜೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಬಿಆರ್‍ಪಿ ಪ್ರದೀಪ್ ವಂದಿಸಿದರು.ಬಿಆರ್‍ಪಿ ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಆಕರ್ಷಣೆಗಳುಸೇರಿಗೆ ಭತ್ತ ಸುರಿಯುವ ಹಾಗೂ ಚೆನ್ನೆಮಣೆ ಆಟದ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮಧ್ಯೆ ಹಲಸಿನ ಸೊಳೆ, ಹಲಸಿನ ಬೀಜದಿಂದ ತಯಾರಿಸಿದ ವಿವಿಧ ಖಾದ್ಯ, ನೆಲ್ಲಿ ಪಾನಕ, ಬೆಲ್ಲ ನೀರನ್ನು ನೀಡಲಾಯಿತು. ತುಳು ಎದುರುಕತೆಗಳನ್ನು ಕೇಳಲಾಯಿತು. ಆಟಿ ತಿಂಗಳಲ್ಲಿ ಬಳಸುವ ಸೊಪ್ಪು ತರಕಾರಿ ಹಾಗೂ ತುಳಿನಾಡಿನ ಪ್ರಾಚೀನ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಇಲಾಖೆಯ ಅಧಿಕಾರಿಗಳು ತಯಾರಿಸಿ ತಂದ 42 ಬಗೆಯ ವಿವಿಧ ಭಕ್ಷ್ಯಗಳನ್ನು ಮಧ್ಯಾಹ್ನದ ಊಟದೊಂದಿಗೆ ಸವಿಯಲಾಯಿತು.
