ಶ್ರೀರಾಮ ಪಟ್ಟಾಭಿಷೇಕಕ್ಕೂ ಮೊದಲು , ಶ್ರೀರಾಮನು ಕರ್ತವ್ಯ ಪ್ರಜ್ನೆ ಉಳ್ಳವನೆಂದು ತಿಳಿದೂ ಕೂಡ ವಸಿಷ್ಠ ಮಹರ್ಷಿಗಳು ತಮ್ಮ ಕರ್ತವ್ಯದ ನೆಲೆಯಲ್ಲಿ ಮಹಾರಾಜನ ಜವಾಬ್ದಾರಿಗಳನ್ನು ಒಂದೊಂದಾಗಿ ತಿಳಿಸುತ್ತಾರೆ. ಇಂದು ನಮ್ಮ ಮಕ್ಕಳು ಜವಾಬ್ದಾರಿಯುತರೇ ಆದರೂ ಕೂಡ ಹೆತ್ತವರು , ಗುರುಗಳು ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಲೇ ಬೇಕು ಎಂದು ವಿಠಲ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿಶ್ವೇಶ್ವರ ಭಟ್ ಹೇಳಿದರು.
ಇವರು ಕಾಲೇಜಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ 125ನೇ ಹುಟ್ಟು ಹಬ್ಬದ ವರ್ಷಾಚರಣೆ ಕಾರ್ಯಕ್ರಮ ಮಾಲಿಕೆಯಲ್ಲಿ ಆಯೋಜಿಸಲಾದ ಮಾಸ್ತಿಯವರ ಕಾವ್ಯ `ಶ್ರೀರಾಮ ಪಟ್ಟಾಭಿಷೇಕದ ಗೀತರೂಪಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತ ವಿದುಷಿ ಪಾರ್ವತಿ ಭಟ್ ಹೊಸಮೂಲೆ ಇವರಿಂದ ಮಾಸ್ತಿಯವರ ಕಾವ್ಯವಾಚನ ಕಾರ್ಯಕ್ರಮವು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಂಧ್ಯಾಲಕ್ಷ್ಮೀ , ರೂಪಾಶ್ರೀ, ವಿನುತಾ, ರಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಿಂತನ್ ಸ್ವಾಗತಿಸಿ, ಮಹಮ್ಮದ್ ಸೈಫ್ ವಂದಿಸಿದರು. ತಿರುಮಲೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.
