ಮೂಡುಬಿದಿರೆ: ಪುರಸಭೆ ಮಾಜಿ ಸದಸ್ಯ ನಾರಾಯಣ ಸಾಮಿಲ್‍ನ ಮಾಲೀಕ ಎಂ.ಶೀನಪ್ಪ(70)ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ನಾಗರಕಟ್ಟೆಯಲ್ಲಿದ್ದ 1ನಾರಾಯಣ ಸಾ ಮಿಲ್’ ಅನ್ನು ತನ್ನ ತಂದೆ ಸುಬ್ಬ ಪೂಜಾರಿ ನಿಧನದ ಬಳಿಕ ಮುಂದುವರಿಸಿಕೊಂಡು ಹೋದ ಶೀನಪ್ಪ ಅವರು ಮರದ ವ್ಯಾಪಾರದಲ್ಲಿ ಸಕ್ರಿಯರಾಗಿದ್ದರು. ಬಡವರಿಗೆ ಶವ ಸಂಸ್ಕಾರಕ್ಕೆ ಉಚಿತ ಕಟ್ಟಿಗೆಯನ್ನು, ಮನೆ ನಿರ್ಮಾಣಕ್ಕೆ ಮೂಲಭೂತ ಸಾಮಾಗ್ರಿ, ಬಡಹೆಣ್ಮಕ್ಕಳ ಮದುವೆಗೆ ಧನಸಹಾಯ ಮಾಡಿ ಸಾಮಾಜಿಕ ಕಾಳಜಿ ತೋರಿದವರು.

ಮಾಜಿ ಸಚಿವ ಅಮರನಾಥ ಶೆಟ್ಟಿಯವರ ನಿಕಟವರ್ತಿಯಾಗಿದ್ದ ಅವರು ಸಂಸ್ಥಾ ಕಾಂಗ್ರೆಸ್‍ನಿಂದ ತನ್ನ ರಾಜಕೀಯ ಜೀವನ ಆರಂಭಿಸಿ ಜನತಾ ಪಕ್ಷ ನಂತರ ಜೆಡಿಎಸ್‍ನಲ್ಲಿ ಹಲವು ವರ್ಷಗಳ ಕಾಲ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಬಳಿಕ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರಯ.
1987ರಲ್ಲಿ ಶಿರ್ತಾಡಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಎಸ್.ಡಿ ಸಾಮ್ರಾಜ್ಯ ವಿರುದ್ಧ ಪರಾಭವಗೊಂಡಿದ್ದರು. ಮೂಡುಬಿದಿರೆ ಪುರಸಭೆಗೆ ಮೂರು ಬಾರಿ ಚುನಾಯಿತರಾಗಿದ್ದರು. ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ, ನಾಗರಕಟ್ಟೆ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ, ಬೋರುಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಸ್ಥಾಪಕ ಅಧ್ಯಕ್ಷ, ಲಯನ್ಸ್ ಕ್ಲಬ್‍ನ ಸ್ಥಾಪಕ ಸದಸ್ಯ ಹೀಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸಾರ್ವಜನಿಕ ವಲಯದಲ್ಲಿ ಜನಾನುರಾಗಿದ್ದರು.
ಅವರಿಗೆ ಮೂವರು ಪುತ್ರಿಯರಿದ್ದಾರೆ. ಸೋಮವಾರ ಮಧ್ಯಾಹ್ನ ಅವರ ಮಾಸ್ತಿಕಟ್ಟೆಯ ನಿವಾಸದ ಆವರಣದಲ್ಲಿ ಶವಸಂಸ್ಕಾರ ನಡೆಸಲಾಯಿತು. ಶಾಸಕರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಪುರಸಭೆ ಅಧ್ಯಕ್ಷೆ ರೂಪಾ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಸುದರ್ಶನ್ ಎಂ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಶೋಕಾರ್ಥ ಸೋಮವಾರ ಮಧ್ಯಾಹ್ನ ಒಂದು ಗಂಟೆ ಪೇಟೆಯ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು.
