ಬಂಟ್ವಾಳ: ಪ್ರತಿಯೊಬ್ಬ ಜನಸಮಾನ್ಯನಿಗೂ ಕಾನೂನಿನ ಅರಿವೂ ಮೂಡಬೇಕು ಎನ್ನುವ ಹಿತದೃಷ್ಟಿಯಿಂದ ನಿರಂತರವಾಗಿ ಕಾನೂನು ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಪ್ರತಿಯಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದ್ದಾರೆ.

ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಸೌತ್‍ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಬಂಟ್ವಾಳ ವಲಯ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಶಂಭೂರು ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಂಭೂರು ಪ್ರೌಢಶಾಲೆಯಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳಿಗೆ ತನ್ನದೇ ಆದ ಪ್ರಾಧನ್ಯತೆ ಇದೆ. ಅವುಗಳ ಬಗ್ಗೆಯೂ ಕಾನೂನು ಮಾಹಿತಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ರಾಜಕೀಯವಾಗಿ ಅಥವಾ ಇತರ ಯಾವುದೇ ಕಾರಣಕ್ಕೂ ದುರಪಯೋಗಪಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಶಂಭೂರು ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟರಮಣ ಶೆಣೈ, ಸಹಾಯಕ ಸರ್ಕಾರಿ ವಕೀಲ ಸತೀಶ್‍ಕುಮಾರ್ ಶಿವಗಿರಿ, ಎಸ್‍ಕೆಪಿಎ ಅಧ್ಯಕ್ಷ ಸುಕುಮಾರ ಬಂಟ್ವಾಳ, ಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಎಂ.ಸುದರ್ಶನ ಕುಮಾರ್ ಪೋಕ್ಸೋ ಕಾಯ್ದೆ 2015ರ ಬಗ್ಗೆ ಮಾಹಿತಿ ನೀಡಿದರು. ಎಸ್‍ಕೆಪಿಎ ಕಾರ್ಯದರ್ಶಿ ಹರೀಶ್ ಕುಂದರ್ ಸ್ವಾಗತಿಸಿ, ನ್ಯಾಯವಾದಿ ರವೀಂದ್ರ ಕುಕ್ಕಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು, ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ಪೈ ವಂದಿಸಿದರು, ಎಸ್‍ಕೆಪಿಎ ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ ನಿರೂಪಿಸಿದರು.
