ಬಂಟ್ವಾಳ: ಬಂಟ್ವಾಳ_ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆ ಸಮೀಪದ ದೈಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮುಂಜಾನೆ ಕಳ್ಳರು ನುಗ್ಗಿ ಅಲ್ಲಿನ ಶಿವಲಿಂಗಕ್ಕೆ ಅಳವಡಿಸಿದ್ದ ಬೆಳ್ಳಿದೃಷ್ಟಿ ಮತ್ತು ಮೂರು ಕಾಣಿಕೆ ಡಬ್ಬಿ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ.ಇಲ್ಲಿನ ಪ್ರಧಾನ ಅರ್ಚಕ ಹರೀಶ ಭಟ್ ಎಂಬವರು ಶನಿವಾರ ಬೆಳಿಗ್ಗೆ ಸುಮಾರು ಐದೂವರೆ ಗಂಟೆಗೆ ಎಂದಿನಂತೆ ಪೂಜೆಗೆ ಬಂದಿದ್ದ ವೇಳೆ ಘಟನೆ ಗಮನಕ್ಕೆ ಬಂದಿದ್ದು, ತಕ್ಷಣವೇ ದೇವಳದ ಮಾಜಿ ಆಡಳಿತ ಮಂಡಳಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

23btl-SI Visit

23btl-Rayee
ಆರಂಭದಲ್ಲಿ ದೇವಳದ ಸುತ್ತು ಗೋಪುರದ ಎದುರು ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಕಬ್ಬಿಣದ ರಾಡ್ ಬಳಸಿ ಚಿಲಕ ಸಹಿತ ಮುರಿದು ಕಳ್ಳರು ಒಳಪ್ರವೇಶಿಸಿರುವುದು ಕಂಡು ಬಂದಿದೆ. ಇಲ್ಲಿನ ಗರ್ಭಗುಡಿ ಬಾಗಿಲಿಗೆ ಅಳವಡಿಸಿದ್ದ ಸಂಕೋಲೆ ಸಹಿತ ಚಿಲಕವನ್ನು ಕೂಡಾ ಅದೇ ಮಾದರಿಯಲ್ಲಿ ಮುರಿದು ಬಳಿಕ ಶಿವಲಿಂಗದಿಂದ ಬೆಳ್ಳಿದೃಷ್ಟಿ ಕಳವು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಗರ್ಭಗುಡಿ ಹಿಂಬದಿಯಲ್ಲಿ ಇರುವ ಗಣಪತಿ ಮತ್ತು ಸುಬ್ರಹ್ಮಣ್ಯ ದೇವರ ಪ್ರತ್ಯೇಕ ಗುಡಿ ಬಾಗಿಲು ಮುಟ್ಟದೆ ಇಲ್ಲಿನ ಒಟ್ಟು ಮೂರು ಕಾಣಿಕೆ ಡಬ್ಬಿಗಳನ್ನು ಮಾತ್ರ ದೇವಸ್ಥಾನದ ಆವರಣದಲ್ಲೇ ಒಡೆದು ಸುಮಾರು ಆರು ಸಾವಿರ ಮೊತ್ತದ ಹಣ ಎಗರಿಸಿದ್ದಾರೆ. ಇನ್ನೊಂದು ಖಾಲಿ ಕಾಣಿಕೆ ಡಬ್ಬಿ ದೇವಸ್ಥಾನದ ಎದುರಿನ ಗದ್ದೆ ಬದಿ ಕಾಲು ದಾರಿಯಲ್ಲಿ ಪತ್ತೆಯಾಗಿದೆ.
ಭೇಟಿ:
ಬಂಟ್ವಾಳ ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ, ಗ್ರಾಮಾಂತರ ಠಾಣಾಧಿಕಾರಿ ಎ.ಕೆ.ರಕ್ಷಿತ್, ಎಎಸೈ ರಮೇಶ್, ಸುರೇಶ್ ಕುಮಾರ್, ವಾಸು ನಾಯ್ಕ ಮತ್ತಿತರ ಪೊಲೀಸರ ತಂಡವು ಶನಿವಾರ ಬೆಳಿಗ್ಗೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ದೇವಳದ ಮಾಜಿ ಆಡಳಿತ ಮೊಕ್ತೇಸರ ರಮೇಶ ಭಟ್ ಮಾದೇರಿ, ಮಾಜಿ ಮೊಕ್ತೇಸರರಾದ ಬಾಲಕೃಷ್ಣ ಭಟ್ ಸಿದ್ದೈಕೋಡಿ, ಮಧುಕರ ಬಂಗೇರ, ಭಜನಾ ಮಂಡಳಿ ಅಧ್ಯಕ್ಷ ದಿನೇಶ ಭಟ್, ಸಂಚಾಲಕ ಎಂ.ಸದಾನಂದ ಗೌಡ, ಅರ್ಚಕ ರಾಮಚಂದ್ರ ಭಟ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯ ಪದ್ಮನಾಭ ಗೌಡ ಮತ್ತಿತರರು ಪೊಲೀಸರಿಗೆ ವಿವಿಧ ಮಾಹಿತಿ ನೀಡಿದರು.

ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ:

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈಗಾಗಲೇ ವಿವಿಧ ದೇವಸ್ಥಾನ ಮತ್ತು ದೈವಸ್ಥಾನ ಮುಖ್ಯಸ್ಥರನ್ನು ಕರೆಸಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದ್ದು, ತಕ್ಷಣವೇ ಇಲ್ಲಿನ ದೇವಳಕ್ಕೂ ಅಳವಡಿಸುವಂತೆ ಪೊಲೀಸರು ಎಚ್ಚರಿಸಿದರು.
ಆಡಳಿತಾಧಿಕಾರಿ ಗೈರು, ಭಕ್ತರ ಆಕ್ರೋಶ:

ಇಲ್ಲಿನ ಪ್ರಭಾರ ಆಡಳಿತಾಧಿಕಾರಿ, ರಾಯಿ ಗ್ರಾಮ ಪಂಚಾಯಿತಿ ಪಿಡಿಒ ವೆಂಕಟೇಶ್ ಅವರಿಗೆ ಈ ಬಗ್ಗೆ ತಕ್ಷಣವೇ ಮಾಹಿತಿ ನೀಡಿದ್ದರೂ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸುವ ವೇಳೆ ಅವರು ಬಂದಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಭಜನಾ ಮಂಗಲೋತ್ಸವ, ವಾರ್ಷಿಕ ಜಾತ್ರೆ ಮತ್ತು ಸಿದ್ಧಕಟ್ಟೆ ಬ್ಯಾಂಕಿನ ಲಾಕರ್‍ನಲ್ಲಿ ಇಟ್ಟಿರುವ ದೇವಳದ ಚಿನ್ನಾಭರಣ ಬಗ್ಗೆ ಪದೇ ಪದೇ ತಗಾದೆ ತೆಗೆಯುವ ಇವರನ್ನು ತಕ್ಷಣವೇ ತೆರವುಗೊಳಿಸುವಂತೆ ಮಂಗಳೂರು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದರು.

By suddi9

Leave a Reply

Your email address will not be published. Required fields are marked *