ಮೂಡುಬಿದಿರೆ: ಹಲವು ಅಧಿಕಾರಿಗಳಿಗೆ ಬೆದರಿಕೆಗಳಿದ್ದರೂ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗೆಯೇ ಅಧಿಕಾರಿಗಳ ಆತ್ಮಹತ್ಯೆ ಮುಂದುವರಿದರೆ, ಬೆದರಿಕೆಗೊಳಗಾದರೆ ಮುಂದೆ ಯುವ ಸಮುದಾಯ ಪೋಲೀಸ್ ಇಲಾಖೆಗೆ ಸೇರಲು ಹಿಂಜರಿಯಬಹುದು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆಜೆ ಜಾರ್ಜ್ ತಕ್ಷಣ ರಾಜಿನಾಮೆ ನೀಡಬೇಕು ಹಾಗೂ ಇಬ್ಬರು ಪೋಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಮುಖಂಡ ನಿತೇಶ್‍ಕುಮಾರ್ ಆಗ್ರಹಿಸಿದ್ದಾರೆ.


ಅವರು ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಇಲ್ಲಿನ ಬಸ್‍ನಿಲ್ದಾಣದಲ್ಲಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಸಾಲು ಸಾಲು ಅಧಿಕಾರಿಗಳು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಮಾನಸಿಕ ಖಿನ್ನತೆಗೊಳಗಾಗಿರುವುದಾಗಿ ಸರ್ಕಾರ ಹೇಳುತ್ತಿದ್ದು ಅದಕ್ಕೆ ಕಾರಣರಾದವರು ಯಾರು? ಎಂದು ತನಿಖೆ ಆಗಬೇಕು. ಸರ್ಕಾರ ತನ್ನ ಮೂಗಿನ ನೇರಕ್ಕೆ ನ್ಯಾಯಾಂಗ ತನಿಖೆಗೆ ಅಧಿಕಾರಿಯನ್ನು ನೇಮಿಸುವ ಬದಲು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಅವರು ಈ ದೇಶಕ್ಕೆ ಸೈನಿಕರಷ್ಟೇ ಪೋಲೀಸರೂ ಮುಖ್ಯ. ಪೋಲೀಸರಿಗೆ ಅನ್ಯಾಯವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ನಂತರ ಮೆರವಣಿಗೆ ನಡೆಸಿ ಮೂಡುಬಿದಿರೆ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ರಾಜೇಶ್, ಬಿಜೆಪಿ ಮುಖಂಡರಾದ ಕೆ. ಪಿ. ಜಗದೀಶ್ ಅಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.
