ಬಂಟ್ವಾಳ:ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಂದಾಯ ಇಲಾಖೆ ನೌಕರರ ಸಂಘವನ್ನು ಮತ್ತೆ ಪುನಶ್ಚೇತನಗೊಳಿಸುವ ಬಗ್ಗೆ ಬಿ.ಸಿ.ರೋಡ್‍ನ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು. ಇದೇ ವೇಳೆ ಕಂದಾಯ ಇಲಾಖೆ ನೌಕರರು ಮತ್ತು ಗ್ರಾಮ ಲೆಕ್ಕಿಗರ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸಲಾಯಿತು.
ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಭದ್ರತೆ ಇಲ್ಲದೆ ಕಂದಾಯ ನಿರೀಕ್ಷಕರನ್ನು ರಾತ್ರಿ ವೇಳೆ ಕರ್ತವ್ಯಕ್ಕೆ ಕಳುಹಿಸುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಯಿತು. ಈ ಹಿಂದೆ ಗ್ರಾಮ ಲೆಕ್ಕಿಗರು ಮತ್ತು ಗ್ರಾಮ ಸಹಾಯಕರ ಮೇಲೆ ಮರಳು ಮಾಫಿಯಾ ತಂಡದಿಂದ ಹಲ್ಲೆ ನಡೆದಿದೆ ಎಂದು ಸದಸ್ಯರು ನೆನಪಿಸಿಕೊಂಡರು.
ಕಂದಾಯ ಇಲಾಖೆ ನೌಕರರನ್ನು ಅನ್ಯ ಇಲಾಖೆ ಕೆಲಸಗಳಿಗೆ ನಿಯೋಜನೆ ಜೊತೆಗೆ ರಜಾದಿನ ಮತ್ತು ಸಂಜೆ ಆರು ಗಂಟೆ ಬಳಿಕವೂ ಸಭೆ ಕರೆಯುವ ಮೂಲಕ ಮಹಿಳಾ ಸಿಬ್ಬಂದಿಗಳಿಗೂ ಅನಾನುಕೂಲವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಸಂಘದ ಜಿಲ್ಲಾಧ್ಯಕ್ಷ ಸೀತಾರಾಮ, ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ನಾಥ್, ನಿವೃತ್ತ ಕಂದಾಯ ಅಧಿಕಾರಿ ಶಂಕರ ಪೂಜಾರಿ ಮತ್ತಿತರರು ಸಂಘದ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ತಾಲ್ಲೂಕು ಸಂಘಕ್ಕೆ 2016-17ನೇ ಸಾಲಿನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ತಾಲ್ಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರ ನಾಯ್ಕ, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಜನಾರ್ದನ ಮತ್ತಿತರರು ಇದ್ದರು.
ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಉಪ ತಹಶೀಲ್ದಾರ್ ಜೆ.ಪಿ.ರಾಡ್ರಿಗಸ್ ವಂದಿಸಿದರು.

By suddi9

Leave a Reply

Your email address will not be published. Required fields are marked *