ಬಂಟ್ವಾಳ: ಕೇವಲ ಕಾರ್ಯಕ್ರಮ ಮಾಡಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಕಾಟಾಚಾರಕ್ಕೆ ಕೃಷಿ ಅಭಿಯಾನ ಮಾಡಬೇಡಿ. ಬದಲಾಗಿ ತಾಲೂಕಿನ ಕೃಷಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೃಷಿ ಅಭಿಯಾನ ಮಾಡಿ ಎಂದು ತಾಲೂಕು ಹಾಗೂ ಜಿ.ಪಂ.ಸದಸ್ಯರು ಕೃಷಿ ಅಧಿಕಾರಿಗೆ ತಾಕೀತು ಮಾಡಿದ್ದಾರೆ.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೆರಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಟಚಾರದ ಕೃಷಿ ಅಭಿಯಾನದ ವಿರುದ್ದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಅಧಿಕಾರಿ ಇಲಾಖಾ ವರದಿ ನೀಡುತ್ತಿದ್ದಂತೆಯೇ ಎದ್ದು ನಿಂತ ಸದಸ್ಯ ಉಸ್ಮಾನ್ ಕರೋಪಾಡಿ ಮಾತನಾಡಿ ಕೃಷಿ ಇಲಾಖೆ ಕಾಟಚಾರಕ್ಕೆ ಕೃಷಿ ಅಭಿಯಾನವನ್ನು ನಡೆಸುತ್ತಿದೆ. ರೈತರು ಬೀಜ ಬಿತ್ತನೆ ಮಾಡಿದ ಬಳಿಕ ಕೃಷಿ ಅಭಿಯಾನ ನಡೆಸಿದರೆ ಯಾವ ಕೃಷಿಕರಿಗೂ ಪ್ರಯೋಜನವಿಲ್ಲ. ಕರೋಪಾಡಿಗೆ ಸಂಜೆ ಮೂರು ಗಂಟೆಗೆ ಬಂದು ತಕ್ಷಣ ವಾಪಸ್ಸಾಗಿದ್ದಾರೆ ಇದರಿಂದ ಯಾವ ಮಾಹಿತಿ ಕೃಷಿಕನಿಗೆ ಸಿಗಲು ಸಾಧ್ಯ ಎಂದು ಅಸಮಾಧನ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕೃಷಿ ಅಭಿಯಾನ ಮಾಡಲು ಇಲಾಖೆ ಪ್ರಯತ್ನಿಸಬೇಕು. ಸರ್ಕಾರದ ಯೋಜನೆಗಳನ್ನು ಕೃಷಿಕರಿಗೆ ತಿಳಿಸುವ ಅಭಿಯಾನವಾಗಬೇಕು ಎಂದರು. ಈ ಸಂದರ್ಭ ಕೃಷಿ ಅಧಿಕಾರಿ ತಮ್ಮ ನಿಲುವನ್ನು ಸಮರ್ಥನೆ ಮಾಡಲು ಮುಂದಾಗಿದ್ದು ಎಂ.ಎಸ್.ಮಹಮ್ಮದ್ ಅವರನ್ನು ಕೆರಳಿಸಿತು. ರೈತರಿಗೆ ಮಾಹಿತಿ ನೀಡದೆ ಕೇವಲ ಪ್ರಚಾರಕ್ಕಷ್ಟೇ ಸೀಮಿತಗೊಳಿಸಲು ಕಾರ್ಯಕ್ರಮ ಮಾಡಬೇಡಿ ಇದರಿಂದ ಸ್ವಲ್ಪವಾದರೂ ರೈತರಿಗೆ ಪ್ರಯೋಜನವಾಗಲಿ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷ ಚಂದ್ರಹಾಸ ಕರ್ಕೆರಾ ಮಾತನಾಡಿ ಮುಂದಿನ ವರ್ಷದಿಂದ ಕೃಷಿ ಅಭಿಯಾನವನ್ನು ಎಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಮಾಡಿ, ಇಲಾಖೆಯ ಯೋಜನೆಗಳ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ತಾಲೂಕಿನ ಎಲ್ಲಾ ಕೃಷಿಕರಿಗೂ ತಲುಪುವಂತೆ ನೋಡಿಕೊಳ್ಳಿ ಎಂದು ಚರ್ಚೆಗೆ ತೆರೆ ಎಳೆದರು.
sಸಭೆ ಹೊಲಸು ಮಾಡಬೇಡಿ – ಸದಸ್ಯನ ಸಲಹೆ:
ಒಂದೇ ವಿಚಾರಕ್ಕೆ ಸಂಬಂಧಿಸಿ ಅನಗತ್ಯ ಚರ್ಚೆ ಮಾಡಿಕೊಂಡು ಸಭೆಯನ್ನು ಹೊಲಸು ಮಾಡಬೇಡಿ ಎಂದು ಆಡಳಿತ ಪಕ್ಷದ ಸದಸ್ಯ ಪ್ರಭಾಕರ ಪ್ರಭು ಎಲ್ಲಾ ಸದಸ್ಯರಿಗೆ ಸಲಹೆ ನೀಡುವ ಮೂಲಕ ಗಮನ ಸೆಳೆದರು. ಒಂದೇ ವಿಚಾರವಾಗಿ ಜಿ.ಪಂ.ನ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಸೂಕ್ಷವಾಗಿ ಗಮನಿಸುತ್ತಿದ್ದ ಪ್ರಭು ಅದು ಮಿತಿಮೀರುತ್ತಿದ್ದಂತೆಯೆ ಎದ್ದು ನಿಂತು ಅಗತ್ಯ ವಿಚಾರಗಳಿಗೆ ಮಾತ್ರ ಚರ್ಚೆ ಮಾಡಿ. ಒಂದೆ ವಿಚಾರವನ್ನು ಇಟ್ಟುಕೊಂಡು ಗಂಟೆಗಟ್ಟೆಲೆ ಚಚೆರ್À ಮಾಡುವುದರಿಂದ ಎಲ್ಲರ ಸಮಯ ವ್ಯರ್ಥವಾಗುವುದರೊಂದಿಗೆ ಸಭೆಯೂ ಅರ್ಥಹೀನವಾಗುತ್ತದೆ. ಒಬ್ಬ ಸದಸ್ಯ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕರೆ ಮತ್ತೊಬ್ಬರು ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಬೇಡಿ. ಅಗತ್ಯ ವಿಚಾರಗಳನ್ನು ಚರ್ಚೆ ಮಾಡಿ ನಿರ್ಣಯ ದಾಖಲಿಸಿಕೊಳ್ಳಿ ಇದು ನನ್ನ ಸಲಹೆ ಎಂದು ತೀಕ್ಷ್ಣವಾಗಿ ಮಾತನಾಡಿದರು.
ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರಾ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳ ಮಾಧವ ಮಾವೆ, ತುಂಗಪ್ಪ ಬಂಗೇರಾ, ರವೀಂದ್ರ ಕಂಬಳಿ, ಎಂ.ಎಸ್.ಮಹಮ್ಮದ್, ಕಮಲಾಕ್ಷಿ ಪೂಜಾರಿ, ಮಮತಾ ಗಟ್ಟಿ, ತಾ.ಪಂ.ಸದಸ್ಯರಾದ ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ಉಸ್ಮಾನ್ ಕರೋಪಾಡಿ, ಕುಮಾರ್ ಭಟ್, ರಮೇಶ್ ಕುಡ್ಮೇರು ಚರ್ಚೆಯಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *