ವೀರಕಂಭ ಗ್ರಾಮದ ಕೇಪುಲಕೋಡಿಯಲ್ಲಿ ಭಾನುವಾರ ಸಂಜೆ ಬೃಹತ್ ಗಾತ್ರದ ಹಳೆ ಮರವೊಂದು ಬುಡಸಹಿತ ಉರುಳಿ ಬಿದ್ದ ಪರಿಣಾಮ ಇಲ್ಲಿನ ಎರಡು ತಾರಸಿ ಮತ್ತು ಒಂದು ಹೆಂಚಿನ ಮನೆ ಸಹಿತ ದೈವದ ಗುಡಿ ಹಾಗೂ ವಿದ್ಯುತ್ ಕಂಬ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ.
ಇಲ್ಲಿನ ರಸ್ತೆಗೆ ಅಡ್ಡವಾಗಿ ಮರ ಉರುಳಿ ಬಿದ್ದ ಪರಿಣಾಮ ವೀರಕಂಭ ಗ್ರಾಮದ ಎರ್ಮೆಮಜಲು-ಬಾಯಿಲ ಸಂಪರ್ಕ ರಸ್ತೆಯಲ್ಲಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಇಲ್ಲಿನ ನಿವಾಸಿ ಕೊರಗಪ್ಪ ಪೂಜಾರಿ ಮತ್ತು ಚಂದ್ರಶೇಖರ ಪೂಜಾರಿ ಅವರ ತಾರಸಿ ಮನೆಗೆ ಮರದ ದೊಡ್ಡ ಕೊಂಬೆ ರಭಸದಿಂದ ಬಿದ್ದು ತಾರಸಿ ಮತ್ತು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ಪದ್ಮನಾಭ ಪೂಜಾರಿ ಎಂಬವರ ಹೆಂಚಿನ ಛಾವಣಿ ಕೂಡಾ ಹಾನಿಗೀಡಾಗಿದ್ದು, ಮನೆ ಎದುರಿನ ತೆಂಗಿನ ಮರ ಕೂಡಾ ಕುಸಿತಕ್ಕೀಡಾಗಿದೆ. ಈ ಎರಡು ಮನೆಗಳ ಆವರಣ ಗೋಡೆ ಕುಸಿದು ಬಿದ್ದಿದ್ದು, ಘಟನೆ ವೇಳೆ ಎಲ್ಲರೂ ಮನೆಯೊಳಗೆ ಇದ್ದರೂ ಯಾವುದೇ ತೊಂದರೆಯಾಗಿಲ್ಲ ಎಂದಿದ್ದಾರೆ.
ಇಲ್ಲಿನ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಇನ್ನೆರಡು ಕಂಬಗಳು ವಾಲಿಕೊಂಡು ವಿದ್ಯುತ್ ತಂತಿ ಕೂಡಾ ಜೋತು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಮರದ ಬುಡದಲ್ಲಿ ಇದ್ದ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ಕಟ್ಟೆಗೆ ಸಂಪೂರ್ಣ ಹಾನಿ ಉಂಟಾಗಿದೆ ಎಂದು ತಿಳಿಸಿದ್ದಾರೆ.

