ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನಡೆಸಿದ ಮನವೊಲಿಕೆ ಫಲ ನೀಡಿದ್ದು, ಐಪಿಎಸ್ ಸೇವೆಗೆ ನೀಡಿದ್ದ ರಾಜೀನಾಮೆಯನ್ನು ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಬುಧವಾರ ವಾಪಸ್ ಪಡೆದಿದ್ದಾರೆ.

ಯುವತಿಯ ಫೋಟೊ ತೆಗೆದ ಆರೋಪ ಹಿನ್ನೆಲೆಯಲ್ಲಿ ಮೇ 27ರಂದು ರಾಜೀನಾಮೆ ನೀಡಿದ್ದ ರವೀಂದ್ರನಾಥ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು. ಕೆಎಸ್‌ಆರ್‌ಪಿ ಸಿಬ್ಬಂದಿ ಪ್ರತಿಭಟನೆ ನಡೆಸಿದ ಬೆನ್ನಿಗೆ, ದಲಿತಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದವು. ಕೆಲ ಸಚಿವರು ರವೀಂದ್ರನಾಥ್ ಬೆಂಬಲಕ್ಕೆ ನಿಂತಿದ್ದರು. ಪ್ರಕರಣ ರಾಜಕೀಯ ಹಾಗೂ ಜಾತಿ ಬಣ್ಣ ಕೂಡ ಪಡೆದುಕೊಂಡಿತ್ತು. ಸದ್ಯಕ್ಕೆ ಆ ಎಲ್ಲ ಬೆಳವಣಿಗೆಗಳಿಗೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೆ ಸಿಐಡಿ ಪೊಲೀಸರು ನಡೆಸುತ್ತಿರುವ ತನಿಖೆ, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಸೇರಿದಂತೆ ಇತರ ಇಬ್ಬರ ವಿರುದ್ಧ ದಾಖಲಿಸಿರುವ ಜಾತಿ ನಿಂದನೆ ಕೇಸಿನ ವಿಚಾರಣೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಧಾರವಾಡಕ್ಕೆ ರವೀಂದ್ರನಾಥ್ ವರ್ಗಾವಣೆ ಆದೇಶ ರದ್ದುಪಡಿಸಿ ಬೆಂಗಳೂರಿನಲ್ಲೇ ಸೂಕ್ತ ಹುದ್ದೆ ನೀಡುವ ಸಾಧ್ಯತೆ ಇದೆ.

ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಂಧಾನ ನಡೆಸಿದ ಬಳಿಕ ರಾಜೀನಾಮೆ ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದ ರವೀಂದ್ರನಾಥ್ ಮಂಗಳವಾರ ಬೆಳಗ್ಗೆ ತಮ್ಮ ನಡೆಯಿಂದ ಹಿಂದೆ ಸರಿದಿದ್ದರು. ಇದರಿಂದ ಮತ್ತಷ್ಟು ಬಿಗಡಾಯಿಸಿದ್ದ ಪ್ರಕರಣ ಬುಧವಾರ ಸಂಜೆಯವರೆಗೂ ಪ್ರಕೋಪದಲ್ಲೇ ಇತ್ತು. ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವೆಂಕಟಯ್ಯ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ರಾಜೀನಾಮೆ ವಾಪಸ್ ಪಡೆಯಲು ರವೀಂದ್ರನಾಥ್ ಒಪ್ಪಿಗೆ ಸೂಚಿಸಿದರು. ಸಚಿವರಾದ ಮಹದೇವಪ್ಪ ಹಾಗೂ ಆಂಜನೇಯ ದೂರವಾಣಿಯಲ್ಲಿ ಸಂಪರ್ಕಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿದರು. ಬಳಿಕ ಸರಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೀನಾಮೆ ವಾಪಸ್ ಪಡೆಯುವ ಪತ್ರವನ್ನು ರವೀಂದ್ರನಾಥ್ ಸಲ್ಲಿಸಿದರು ಎಂದು ಮೂಲಗಳು ಖಚಿತಪಡಿಸಿವೆ. ಸಭೆಯಲ್ಲಿ ಹಾಲಿ ಮತ್ತು ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

 

By suddi9

Leave a Reply

Your email address will not be published. Required fields are marked *