ಬಂಟ್ವಾಳ: ಅಸಮರ್ಪಕ ಕಸ ನಿರ್ವಹಣೆ, ನಿಗದಿತ ದರಕಿಂತ ಹೆಚ್ಚುವರಿ ಹಣ ವಸೂಲಿ, ಸಾರ್ವಜನಿಕರು ಹಾಗೂ ಸದಸ್ಯರೊಂದಿಗೆ ದರ್ಪದ ವರ್ತನೆ, ಬೆದರಿಕೆ ಹಾಗೂ ಎಲ್ಲ ಮನೆಗೂ ಕಸ ಸಂಗ್ರಹಿಸಲು ಹೋಗದಿರುವ, ಟೆಂಡರ್ ಒಪ್ಪಂದದಂತೆ ನಿಗದಿತ ಕಾರ್ಮಿಕರನ್ನು ಪೂರೈಸದಿರುವ ಹಿನ್ನೆಲೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಅವರಿಗೆ ಪುರಸಭೆಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವನುಮತದ ನಿರ್ಧಾರ ತೆಗೆದುಕೊಳ್ಳಲಾಯಿತು.

ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಂಜೆಡಾ ಮೇಲಿನ ಚರ್ಚೆಯ ವೇಳೆ ಸದಸ್ಯ ದೇವದಾಸ ಶೆಟ್ಟಿ ವಿಷಯ ಪ್ರಸ್ತಾಪಿಸಿ, ಘನ ತ್ಯಾಜ್ಯ ವಿಲೇವಾರಿಗೆ ಪುರಸಭೆಯಿಂದ ಲಕ್ಷಾಂತ ರೂಪಾಯಿ ಟೆಂಡರ್ ನೀಡಲಾಗುತ್ತಿದ್ದರೂ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಮನೆ ಮನೆ ಕಸ ಸಂಗ್ರಹದಲ್ಲೂ ಪುರಸಭೆ ನಿಗದಿ ಪಡಿಸಿದಕ್ಕಿಂತ ಎರಡು ಪಟ್ಟು ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಮನೋಹರ್ ಎಂಬಾತ ಮನೆ ಮನೆ ಕಸ ವಿಲೇವಾರಿ ಮಾಡುತ್ತಿದ್ದಾನೆಲ್ಲದೆ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿದ್ದು ‘ಆ ಮನೋಹರ ಯಾರು?’ ಆತನಿಗೆ ಅಧಿಕಾರ ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಗುತ್ತಿಗೆದಾರನಿಗೆ ವಾಹನ ಸೇರಿದಂತೆ 3.6 ಲಕ್ಷ ಹಚ್ಚುವರಿಯಾಗಿ ಹಣ ಪಾವತಿಸಲಾಗುತ್ತಿದ್ದರೂ ಆತ ಟೆಂಡರ್ ಪಡೆದ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಪೂರ್ತಿ ಕಾರ್ಮಿಕರನ್ನು ನಿಯೋಜಿಸಿಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆತನಿಗೆ ಪುರಸಭೆಯಿಂದ ಎಲ್ಲ ವ್ಯವಸ್ಥೆಯಿಂದ ಮಾಡಿಕೊಟ್ಟರೂ ಕಸ ವಿಲೇವಾರಿ ಮಾತ್ರ ಅದೋಗತಿಗೆ ಇಳಿದಿದೆ. ಇದಕ್ಕೆ ಮುಖ್ಯಾಧಿಕಾರಿಯವರೇ ನೇರ ಹೊಣೆ. ಇಷ್ಟಲ್ಲ ಅವ್ಯವಸ್ಥೆ ಇದ್ದರೂ ಆತನ ವಿರುದ್ಧ ಕನಿಷ್ಠ ಕ್ರಮ ಕೈಗೊಳ್ಳದ ಮುಖ್ಯಧಿಕಾರಿಯವರನ್ನು ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ನೇರ ತರಾಟೆಗೆ ತೆಗೆದುಕೊಂಡು ತಕ್ಷಣ ಈ ಗುತ್ತಿಗೆ ದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಧ್ವನಿ ಗೂಡಿಸಿದ ಸದಸ್ಯೆ ಯಾಸ್ಮೀನ್ ಅವರು, ತಮ್ಮ ಮನೆಗೆ ವಾರಕ್ಕೊಮ್ಮೆ ಕಸ ಸಂಗ್ರಹಿಸಲು ಬರುತ್ತಿದ್ದು, ಈ ಸಂದರ್ಭದಲ್ಲಿ ಪ್ರಶ್ನಿಸಿದಾಗ ಕಸ ಸಂಗ್ರಹಕಾರರು ಬೆದರಿಕೆಯ ರೂಪದಲ್ಲಿ ಅಸಂಬದ್ದವಾಗಿ ಮಾತನಾಡಿದ್ದಾರೆ ಎಂದು ದೂರಿದರು. ಈ ವಿಚಾರದಲ್ಲಿ ಪಕ್ಷ ಭೇದ ಮರೆತು ಸದಸ್ಯರು ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ಸುಧಾಕರ್ ಅವರು ತ್ಯಾಜ್ಯ ವಿಲೇವಾರಿಯಲ್ಲಿ ಗುತ್ತಿಗೆ ದಾರನಿಂದ ಆಗಿರುವ ಲೋಪವನ್ನು ಒಪ್ಪಿಕೊಂಡರು. ಮುಂದಿನ 15 ದಿನಗಳ ಒಳಗಾಗಿ ಈ ಕುರಿತಾಗಿ ವಿವರಣೆ ನೀಡುವಂತೆ ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಲಾಯಿತು. ಹಾಗೆಯೇ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ವಿಶೇಷ ಸಭೆಯೊಂದನ್ನು ನಡೆಸಲು ತೀಮಾನಿಸಲಾಯಿತು. ಈ ಸಂದರ್ಭದಲ್ಲಿ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಸಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಗುವುದು. ಅಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಂಚಾಯತ್ ಕೂಡಾ ಸಹಕರಿಸಿದೆ ಎಂದು ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಅವರು ಸದಸ್ಯ ಗೋವಿಂದ ಪ್ರಭು ಅವರ ಪ್ರಶ್ನೆಗೆ ಉತ್ತರಿಸಿದರು.
ಕತ್ತಲ ಕೂಪ: ಇತ್ತೀಚೆಗೆ ಬೀಸಿದ ಬಿರುಗಾಳಿಗೆ ಪುರಸಭೆ ವ್ಯಾಪ್ತಿಯ ಹೆಚ್ಚಿನ ಭಾಗದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಬೀದಿ ದೀಪಗಳಿಲ್ಲದೆ ಪುರಸಭೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕತ್ತಲು ಆವರಿಸಿದೆ ಎಂದು ಸದಸ್ಯ ದೇವದಾಸ ಶೆಟ್ಟಿ ಆರೋಪಿಸಿದರು. ಇದಕ್ಕೆ ದ್ವನಿ ಗೂಡಿಸಿದ ಆಡಳಿತ ಪಕ್ಷದ ಸದಸ್ಯರು, ಹಾನಿಗೊಳಗಾದ ಬೀದಿ ದೀಪಗಳನ್ನು ಬದಲಿಸುವಂತೆ ಮನವಿ ಮಾಡಿದರೂ ಈವರೆಗೆ ಸರಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುರಸಭಾ ವ್ಯಾಪ್ತಿಯಲ್ಲಿರುವ ಮಾಜಿ ಕೇಂದ್ರ ಸಚಿವರೊಬ್ಬರಿಗೆ ಸೇರಿದ ತೋಟದ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದರೂ, ತಂತಿಯ ಮೇಲೆ ಮರದ ಗೆಲ್ಲುಗಳನ್ನು ಈವರೆಗೆ ಸಂಪೂರ್ಣವಾಗಿ ತೆರವುಗೊಳಿಸಿಲ್ಲ ಎಂದು ಸಭೆಯಲ್ಲಿ ದೂರಿದ ಸದಸ್ಯರು ಕೂಡಲೇ ಅವರಿಗೆ ಪುರಸಭೆಯಿಂದ ನೋಟಿಸ್ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಬಿಜೆಪಿ ವಿರೋಧ: ಪುರಸಭೆ ವ್ಯಾಪ್ತಿಗೊಳಪಟ್ಟ ತಲಪಾಡಿಯ ಮಫತ್ಲಾಲ್ ಲೇಔಟ್ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಯೋಜನೆಗೆ ಕ.ಅ.ಪ್ರಾ. ಶೇಕಡ 5ರಷ್ಟು ಅಂದರೆ 2 ಲಕ್ಷ ರೂಪಾಯಿ ಅನುದಾನ ಪುರಸಭೆಯಿಂದ ನೀಡಲು ಕೋರಿದ ಪತ್ರಕ್ಕೆ ಬಿಜೆಪಿಯ ಐವರು ಸದಸ್ಯರು ಲಿಖಿತವಾಗಿ ಆಕ್ಷೇಪವನ್ನು ವ್ಯಾಕ್ತಪಡಿಸಿದರು.
ಬಿ.ಕಸ್ಬಾ ಗ್ರಾಮದ ಮಾಹಾಲಿಂಗೇಶ್ವರ ದೇವಾಲಯದ ಪಕ್ಕ ಹೊಳೆ ಬದಿಯಲ್ಲಿ ಪಂಜೆಮಂಗೇಶರಾಯರ ಸ್ಮಾರಕ ಭವನ ನಿರ್ಮಾನಕ್ಕೆ ಜಮೀನು ಕಾಯ್ದಿರಿಸಲು ಕಂದಾಯ ಇಲಾಖೆ ನೀಡಿರುವ ಪತ್ರಕ್ಕೆ ಸಭೆ ಅನುಮೋದನೆ ನೀಡಿತು.
ಬಾಳೆಕಾಡು ಎಂಬಲ್ಲಿ ಆಶ್ರಯ ಮನೆ ಯೋಜನೆಯಡಿ ವಾಸ್ತವ್ಯವಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಸದಸ್ಯ ವಾಸು ಪೂಜಾರಿ ಅವರು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು. ಹಾಗೆಯೇ ಪುರಸಭೆ ಕಚೇರಿಗೆ ರಾತ್ರಿ ಕಾವಲುಗಾರನನ್ನು ನೇಮಿಸುವಂತೆಯೂ ವಾಸು ಪೂಜಾರಿ ಈ ಸಂದರ್ಭದಲ್ಲಿ ಆಗ್ರಹಿಸಿದರು.
ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಮುಹಮ್ಮದ್ ಶರೀಫ್, ಜಗದೀಶ್ ಕುಂದರ್, ಗಂಗಾದರ್, ಪ್ರವೀಣ್ ಬಿ., ಬಾಸ್ಕರ್ ಟೈಲರ್, ಸುಗುಣಾಕಿಣಿ, ಚಂಚಲಾಕ್ಷಿ, ಬಿ.ಮೋಹನ್, ಇಕ್ಬಾಲ್ ಗೂಡಿನಬಳಿ, ಮುನೀಶ್ ಅಲಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಕಾರ್ಯಕಲಾಪ ನಡೆಸಿದರು.




