ಬಂಟ್ವಾಳ : ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕೆಲಸ ನಿರ್ವಹಿಸಿದರೆ ಎಲ್ಲರ ಮೆಚ್ಚುಗೆ ಗಳಿಸಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಎ.ಸಂತೋಷ್ ಕುಮಾರ್ ಹೇಳಿದರು. ಅವರು ಮಂಗಳವಾರ ವಯೋನಿವೃತ್ತಿ ಹೊಂದಿದ ತಾಲೂಕು ಸಮಾಜ ಕಲ್ಯಾಣ ಇಲಾಖಾಧಿಕಾರಿ ಕಾಶಿ ಯವರಿಗೆ ಸಮಾಜ ಕಲ್ಯಾಣ ಇಲಾಖಾವತಿಯಿಂದ ಬಿ.ಸಿ.ರೋಡಿನ ಆಶ್ರಮ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾಶಿಯವರನ್ನು ಸನ್ಮಾನಿಸಿ ಮಾತನಾಡಿದರು. ಕಾಶಿಯವರು ಬಂಟ್ವಾಳಕ್ಕೆ ವರ್ಗಾವಣೆಗೊಂಡು ಬಂದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು, ಗಮನೀಯ ಕಾರ್ಯನಿರ್ವಹಿಸಿದ್ದಾರೆ.

ಅವರ ಮುಂದಿನ ನಿವೃತ್ತಿ ಜೀವನ ಶುಭಕರವಾಗಿರಲಿ ಎಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಶಿ ಯವರು, 1977ರಿಂದ ತಾನು ಸರ್ಕಾರಿ ಉದ್ಯೋಗದಲ್ಲಿದ್ದು, ಇಂದು ಸಂತಸದಿಂದ ನಿವೃತ್ತಿಯಾಗುತ್ತಿದ್ದೇನೆ. ಬೇರೆ ತಾಲೂಕುಗಳಿಗಿಂತ ಬಂಟ್ವಾಳ ತಾಲೂಕಿನಲ್ಲಿ ಮಾಡಿದ ಕೆಲಸ ಹೆಚ್ಚು ಖುಷಿ ಕೊಟ್ಟಿದೆ ಎಂದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ಶುಭಹಾರೈಸಿದರು. ಇದೇವೇಳೆ ನಿಲಯ ಮೇಲ್ವಿಚಾರಕರು, ಕಛೇರಿ ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಶ್ರಮಶಾಲೆಯ ಮೇಲ್ವಿಚಾರಕ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
