ಬಂಟ್ವಾಳ: ‘ರಾಷ್ಟ್ರೀಯ ಹೆದ್ದಾರಿ ನಿರ್ಮಾನವಾಗುವುದೇ ಊರಿನ ಜನರ ಜೀವ ಹೀರಲು’ ಎಂಬ ಮಾತು ಬಹುಷಃ ತುಂಬೆ ಗ್ರಾಮದ ರಾಮಲಕಟ್ಟೆ ಜನತೆಯ ಮಟ್ಟಿಗೆ ಸತ್ಯವೆನಿಸಿದಂತಿದೆ. ರಾಷ್ಟ್ರೀಯ ಹೆದ್ದಾರಿ 76ರ ರಾಮಲಕಟ್ಟೆಯಲ್ಲಿ ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಸರಣಿ ಅಪಘಾತಗಳು ಹಾಗೂ ಜೀವಹಾನಿಗಳು ಸ್ಥಳೀಯ ನಾಗರಿಕರನ್ನು ಭಯಭೀತಗೊಳಿಸಿದೆ. ಸರಣಿ ಅಪಘಾತಗಳ ಮೂಲಕ ಈ ಪುಟ್ಟ ಊರು ಇಡೀ ತಾಲೂಕಿನಲ್ಲೇ ಗುರುತಿಸುವಂತಾಗಿದೆ.
ರವಿವಾರ ಮಧ್ಯಾಹ್ನದ ಹೊತ್ತಿಗೆ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಇದು ಎಪ್ರಿಲ್ ತಿಂಗಳಲ್ಲಿ ಸಂಭವಿಸಿದ 4ನೆ ಅಪಘಾತವಾಗಿದೆ. ಅಂದರೆ ಬರೇ 15 ದಿನಗಳಲ್ಲಿ ಇಲ್ಲಿ ನಾಲ್ಕು ಅಪಘಾತಗಳಲ್ಲಿ ಸಂಭವಿಸಿ ಮೂವರು ಬಲಿಯಾಗಿದ್ದಾರೆ. ಪ್ರಸ್ತುತ ವರ್ಷದ ಜನವರಿಯಿಂದ ಎಪ್ರಿಲ್ 17ರವರೆಗೆ ಈ ಊರಲ್ಲಿ ಸಂಭವಿಸಿದ ಸುಮಾರು 10ಕ್ಕೂ ಮೀರಿದ ಅಪಘಾತಗಳಲ್ಲಿ 5 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ.
03

01

02
ಜನವರಿ ತಿಂಗಳ ಆರಂಭದಲ್ಲಿ ಎರಡು ಬಸ್ಗಳು ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಇದೇ ಊರಿನ ನಿವಾಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಹಿಂಬದಿ ಸವಾರ ಇದೇ ಊರಿನಲ್ಲಿ ಬಾವಿಗೆ ಅಳವಡಿಸುವ ರಿಂಗ್ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವಕ ಮೃತಪಟ್ಟಿದ್ದಾರೆ. ಎಪ್ರಿಲ್ ತಿಂಗಳ ಆರಂಭದಲ್ಲಿ ಇಲ್ಲಿನ ನಿವಾಸಿ ಹರೀಶ್ ಎಂಬವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ಸಂಭವಿಸಿ ವಾರ ಕಳೆಯುತ್ತಿದ್ದಂತೆ ರಾಜಸ್ತಾನ ಮೂಲದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಕಾರಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿತ್ತು. ಅಪಘಾತದ ಭೀಕರತೆಗೆ ಕಾರು ಭಾಗಶಃ ನಜ್ಜುಗುಜ್ಜಾಗಿತ್ತು. ಆದರೆ, ಕಾರು ಚಾಲಕ ಪವಾಡದೃಶ್ಯವಾಗಿ ಅಪಾಯದಿಂದ ಪಾರಾಗಿದ್ದು, ಎಲ್ಲರನ್ನು ಆಶ್ವರ್ಯಕ್ಕೀಡು ಮಾಡಿತ್ತು. ನಾಲ್ಕು ದಿನಗಳ ಹಿಂದೆ ಬೈಕೊಂದಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಆಸ್ಪತ್ರೆಯಲ್ಲಿ ಮೃತಪಟಿದ್ದಾನೆ. ಅದರ ಬೆನ್ನಿಗೆ ರವಿವಾರ ಸಂಭವಿಸಿದ ಅಫಘಾತದಲ್ಲಿ ಒಬ್ಬರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೆ ಕಳೆದ ವರ್ಷವೂ ಇಲ್ಲಿ ಅಪಘಾತಗಳು ಸಂಭವಿಸಿದ್ದು, ಪೊಲೀಸ್ ಜೀಪೊಂದು ಢಿಕ್ಕಿಯಾದ ಪರಿಣಾಮ ಮಹಿಳಾ ವೈದ್ಯರೊಬ್ಬರು ಗಾಯಗೊಂಡ ಘಟನೆಯೂ ನಡೆದಿತ್ತು.

ಈ ರೀತಿ ಒಂದರ ಹಿಂದೊಂದರಂತೆ ಸರಣಿ ಅಪಘಾತಗಳು ಇಲ್ಲಿನ ನಾಗರಿಕರನ್ನು ಕಂಗೆಡಿಸಿದೆ. ಊರಿನ ನಾಗರಿಕರು ಹೆದ್ದಾರಿ ಬಳಿಗೆ ಬರಳು ಹೆದರುವಂತಾಗಿದೆ. ತಮ್ಮ ಮಕ್ಕಳನ್ನು ಶಾಲೆ, ಕಾಲೇಜು, ಮದರಸಗಳಿಗೂ ಕಲಿಸಲು ಹೆದರುತ್ತಿದ್ದಾರೆ. ಅಪಘಾತ ನಡೆದಾಗೊಮ್ಮೆ ಸ್ಥಳಕ್ಕೆ ಬರುವ ಪೊಲೀಸರು, ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಯನ್ನು ಜನರಿಂದ ಆಳಿಸುತ್ತಾರೆ. ಆದರೆ ಇಲ್ಲಿಂದ ತೆರಳಿದ ಬಳಿಕ ಮರೆತು ಬಿಡುತ್ತಾರೆ. ಸರಣಿ ಅಪಘಾತದ ಕಡಿವಾಣಕ್ಕೆ ಯಾವುದೇ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ‘ವಾತರ್ಾ ಭಾರತಿ’ಗೆ ಆರೋಪಿಸಿದ್ದಾರೆ.
ರಾಮಲ್ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಿರುವು ಪಡೆದುಕೊಂಡಿದ್ದು, ಇಲ್ಲಿ ವಾಹನಗಳು ಮಿತಿ ಮೀರಿದ ವೃಗದಲ್ಲಿ ಸಂಚರಿಸುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಅಲ್ಲದೆ, ತಿರುವಿನಲ್ಲೇ ರಸ್ತೆಗೆ ತಾಗಿಕೊಂಡು ಮನೆಯೊಂದರ ಕೌಂಪೌಂಡ್ ನಿಮರ್ಿಸಿರುವುದರಿಂದ ಪಾದಾಚಾರಿಗಳು ರಸ್ತೆಯಲ್ಲೇ ನಡೆದಾಡುತ್ತಾರೆ. ಹಾಗೂ ಸ್ಥಳೀಯ ಜನರ ದ್ವಿ, ತ್ರಿಚಕ್ರ ವಾಹನಗಳು ಅಭಿಮುಖವಾಗಿ ಒಮ್ಮೆಲೆ ರಸ್ತೆಗೆ ಎಂಟ್ರಿ ಕೊಡುವುದರಿಂದ ಬಿ.ಸಿ.ರೋಡ್ ಕಡೆಯಿಂದ ವಾಹನಗಳ ಚಾಲಕರಿಗೆ ಗೋಚರವಾಗದೆ ಅಪಘಾತಗಳು ಸಂಭವಿಸುತ್ತಿದೆ ಎಂದು ದೂರಿರುವ ಸ್ಥಳೀಯರು, ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಪಘಾತಗಳಿಗೆ ಕಡಿವಾಣ ಹಾಕುವ ಮೂಲಕ ಅಮಾಯ ಜೀವಗಳನ್ನು ರಕ್ಷಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಫಲ ನೀಡದ ಬ್ಯಾರಿಕೇಡ್
ರಾಮಲ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಸರಣಿ ಅಪಘಾತದಿಂದ ಎಚ್ಚರಗೊಂಡ ಜಿಲ್ಲಾ ಪೊಲೀಸ್ ಇಲಾಖೆ ರಸ್ತೆಯಲ್ಲಿ ಇತ್ತೀಚೆಗೆ ಬ್ಯಾರಿಕೇಡ್ಗಳನ್ನು ಇಟ್ಟಿದೆ. ಆದರೂ ಅಪಘಾತಗಳು ಕಡಿಮೆಯಾಗಿಲ್ಲ. ಬ್ಯಾರಿಕೇಡ್ ಅಳವಡಿಸಿದ ನಂತರವೂ ಎರಡು ಅಪಘಾತ ಸಂಭವಿಸಿ ಎರಡು ಜಿವಗಳು ಬಲಿಯಾಗಿ, ಇಬ್ಬರು ಗಾಯಗೊಂಡಿದ್ದಾರೆ. ಬ್ಯಾರಿಕೇಡ್ ಅಳವಡಿಕೆ ಆಕ್ರೋಶಿತರ ಕಣ್ಣಿಗೆ ಮಣ್ಣಾಕುವ ಕೆಲಸವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬ್ಯಾರಿಕೇಡ್ ಅಳವಡಿಸಿದರೂ ಕಂಟೈನರ್, ಗ್ಯಾಸ್ ಟ್ಯಾಂಕರ್ ಸೇರಿದಂತೆ ಘನ ವಾಹನಗಳು ಮಾತ್ರ ಈ ನಿಧಾನವಾಗಿ ಚಲಿಸುತ್ತದೆ. ಉಳಿದಂತೆ ಬಸ್, ಕಾರು, ಬೈಕ್ ಮೊದಲಾದ ಲಘು ವಾಹನಗಳು ವೇಗವಾಗಿಯೇ ಚಲಿಸುತ್ತದೆ. ಎಲ್ಲ ವಾಹನಗಳೂ ನಿಧಾನವಾಗಿ ಚಳಿಸುವಂತಹ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ ಅಪಘಾತ ವಲಯವೆಂದು ದೊಡ್ಡ ಮಟ್ಟದ ಫಲಕ ಹಾಕುವ ಮೂಲಕ ವಹಾನ ಸವಾರರಲ್ಲಿ ಅರಿವು ಮೂಡಿಸಬೇಕಿದೆ ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಮೃತಕೂಪವಾಗಿರುವ ಆವರಣಗೋಡೆ!
ರಾಮಲ್ಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿಯ ತಿರುವನ್ನು ಪಡೆದುಕೊಂಡಿದ್ದು, ಬಿ.ಸಿ.ರೋಡ್-ಮಂಗಳೂರು ಪಥದ ತಿರುವಿನಲ್ಲಿ ರಸ್ತೆಗೆ ತಾಗಿಕೊಂಡೆ ಸ್ಥಳೀಯ ಮನೆಯೊಂದರ ಆವರಣಗೋಡೆ ಇದೆ. ಹೆದ್ದಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಿ ಸಿರುವ ಈ ಆವರಣಗೋಡೆಯಿಂದ ಪಾದಾಚಾರಿಗಳಿಗೆ ನಡೆದಾಡಲೂ ಜಾಗವಿಲ್ಲದಾಗಿದೆ. ಫುಟ್ಪಾತೇ ಇಲ್ಲದಿರುವುದರಿಂದ ಪಾದಚಾರಿಗಳು ಹಾಗೂ ವಿರುದ್ಧ ಧಿಕ್ಕಿನಲ್ಲಿ ಸಂಚರಿಸುವ ದ್ವಿಚಕ್ರಗಳ ವಾಹನಗಳು ಈ ಕೌಂಪೌಂಡ್ ಬಳಿ ಒಮ್ಮೆಲೆ ರಸ್ತೆಗೆ ಹತ್ತಿದ್ದಾ ತಿರುವಿನಿಂದಾಗಿ ಮುಂಭಾಗದಿಂದ ಬರುವ ವಾಹನಗಳ ಗೋಚರವಾಗದೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.
ಈ ಬಗ್ಗೆ ಊರಿನ ನಾಗರಿಕರು ತುಂಬೆ ಗ್ರಾಮ ಪಂಚಾಯತ್ಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದರೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದೊಂದು ಸಬೂಬು ಹೇಳಿ ತಪ್ಪಿಸಿಕೊಂಡರೆ, ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ಕಣ್ಣಾರೆ ಕಂಡರೂ ಸ್ಥಳೀಯ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಇನ್ನಾದರೂ ಜಿಲ್ಲಾ ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡು ಅಮಾಯಕ ಜೀವ ಬಳಿಯಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *