ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ಕ್ಲಬ್ ವತಿಯಿಂದ ಡಾ| ಬಿ.ಆರ್. ಅಂಬೇಡ್ಕರ್ ಆವರ 125ನೇ ಜನ್ಮ ದಿನಾಚರಣೆ ಹಾಗೂ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ವಧು-ವರರಿಗೆ ಸರಕಾರದಿಂದ ಕೊಡಮಾಡಲ್ಪಟ್ಟ ಸಹಾಯಧನದ ವಿತರಣೆ ಕಾರ್ಯಕ್ರಮ ಮಂಗಳವಾರ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಜರಗಿತು. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 32ನೇ ವರ್ಷದ ಪ್ರಯುಕ್ತ ಫೆ.28ರಂದು ಜರಗಿದ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾದ 20 ಜೋಡಿ ವಧು-ವರರಿಗೆ ರಾಜ್ಯ ಸರಕಾರದಿಂದ ತಲಾ 50 ಸಾವಿರ ರೂ. ಸಹಾಯಧನ ಲಭಿಸಿದ್ದು ವಧು-ವರರಿಗೆ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಗೈದು ಅವರ ಜನ್ಮ ದಿನಾಚರಣೆಗೆ ಚಾಲನೆ ನೀಡಲಾಯಿತು. ವಿವಿಧ ಇಲಾಖೆಗಳಲ್ಲಿ ಸೇವೆಗೈದು ನಿವೃತ್ತಿಗೊಂಡ ಅಕಾರಿಗಳನ್ನು ಈ ವೇಳೆ ಸಮ್ಮಾನಿಸಲಾಯಿತು.
ಜೇಸೀಸ್ ಕ್ಲಬ್ನ ರಾಷ್ಟ್ರೀಯ ಸಂಯೋಜಕ ಸಂಪತ್ ಸುವರ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ತಮ್ಮ ಸಾಧನೆಯಿಂದ ಜೀವನದಲ್ಲಿ ಪ್ರಗತಿ ಹೊಂದಿದ ದಲಿತರನ್ನು ಗುರುತಿಸಿ ಅವರನ್ನು ಸಮ್ಮಾನಿಸುವ ಮೂಲಕ ಮತ್ತು ಸಮಾಜದಲ್ಲಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ಆಯೋಜಿಸುವ ಎಂ. ತುಂಗಪ್ಪ ಬಂಗೇರ ಹಾಗೂ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಕಾರ್ಯ ಅಭಿನಂದನೀಯ. ಡಾ| ಅಂಬೇಡ್ಕರ್ ಅವರ ಧ್ಯೇಯೋದ್ದೇಶಗಳನ್ನು ಪಾಲಿಸಿ ಆ ಮೂಲಕ ನಿಜಾರ್ಥದಲ್ಲಿ ಅವರ ಜನ್ಮ ದಿನಾಚರಣೆ ಸಾರ್ಥಕಗೊಂಡಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಯುವಶಕ್ತಿ ಅಗಾಧವಾಗಿದ್ದು ಶಿಕ್ಷಣದ ಮೂಲಕ ಮಾತ್ರ ಬಲಿಷ್ಟ ರಾಷ್ಟ್ರ ಕಟ್ಟಲು ಸಾಧ್ಯ.ಆಗ ದೇಶ ಶಕ್ತಿಶಾಲಿಯಾದರೂ ಬಲಿಷ್ಟ ಸಂವಿಧಾನ ರೂಪಿಸಿದ ಡಾ| ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ ಎಂದು ಹೇಳಿದರು.
ನಿವೃತ್ತ ಅಕಾರಿಗಳಾದ ಸಿಂಡಿಕೇಟ್ ಬ್ಯಾಂಕ್ನ ಆನಂದ ಕಲಾಬಾಗಿಲು, ವಿದ್ಯುತ್ ಇಲಾಖೆ ಯ ಕೊರಗಪ್ಪ ಎಡ್ತೂರು, ಅಂಚೆ ಇಲಾಖೆಯ ಹೊನ್ನ , ಅರಣ್ಯ ಇಲಾಖೆಯ ಭುಜಂಗ ಅವರನ್ನು ಸಮ್ಮಾನಿಸಲಾಯಿತು.
ಬಂಟ್ವಾಳ ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಜಿ. ಆನಂದ, ತಾ.ಪಂ.ಸದಸ್ಯ ರಮೇಶ್ ಕುಡ್ಮೇರು, ಉದ್ಯಮಿ ವಿಜಯ ರೈ ಆಲದಪದವು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ , ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಸುಜಾತ ಪ್ರಕಾಶ್, ಪಿಲಾತಬೆಟ್ಟು ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಜೆ.ಬಂಗೇರ, ನಾಟಕಕಾರ ಸುನಿಲ್ ಶೆಟ್ಟಿ ಮುಂಬೈ , ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಮತ್ತಿತರರು ಉಪಸ್ಥಿತರಿದ್ದರು.
ದೇವಪ್ಪ ಶೆಟ್ಟಿ ಕುಂಟಜಾಲು ಅವರು ಸ್ವಾಗತಿಸಿದರು.ರಾಜೇಶ್ ಪುಳಿಮಜಲು ಸಮ್ಮಾನ ಪತ್ರ ವಾಚಿಸಿದರು. ಇರ್ವತ್ತೂರು ಗ್ರಾ.ಪಂ.ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರು ವಂದಿಸಿದರು. ಜಿ.ಪಂ.ಸದಸ್ಯ , ಸ್ವಸ್ತಿಕ್ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
