ಬಂಟ್ವಾಳ: ದೇವಸ್ಥಾನದಲ್ಲಿ ಪ್ರಶಾಂತತೆ ಮತ್ತು ಶುಭ್ರತೆ ಜೊತೆಗೆ ಭಕ್ತರ ಪರಿಶುದ್ಧ ಭಕ್ತಿಯಿಂದ ಅಲ್ಲಿನ ಸಾನಿಧ್ಯ ವೃದ್ಧಿಗೆ ಪೂರಕವಾಗುತ್ತದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ವೀರಾಂಜನೇಯ ದೇವಸ್ಥಾನದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಜನರಲ್ಲಿ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ಸಾಧ್ಯವಾಗುತ್ತದೆ. ಇದಕ್ಕಾಗಿ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಬೇಡ ಎಂದರು.
ಬೆಳ್ತಂಗಡಿ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ದೇವರ ಸ್ಮರಣೆಗೆ ಭಕ್ತಿ ಅಗತ್ಯ ಎಂದರು.
ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ, ವಕೀಲ ಅಶ್ವನಿ ಕುಮಾರ್ ರೈ, ನಿವೃತ್ತ ಉಪತಹಶೀಲ್ದಾರ ರಘುಪತಿ ಶಾಸ್ತ್ರಿ, ಉದ್ಯಮಿ ಸದಾನಂದ ಪೂಜಾರಿ, ಭಾಸ್ಕರ ಪೈ ವೇಣೂರು, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್, ಶ್ರೀನಿವಾಸ ಆಳ್ವ ಅಲಂಗಾರ್ ಮತ್ತಿತರರು ಶುಭ ಹಾರೈಸಿದರು.
ಕ್ಷೇತ್ರದ ಆಸ್ರಣ್ಣ ಪಿ.ಕೃಷ್ಣಪ್ರಸಾದ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ಅನಂತ ಆಚಾರ್ಯ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ಚೌಟ, ಪದಾಧಿಕಾರಿಗಳಾದ ರತ್ನಾಕರ ಎಸ್.ಶೆಟ್ಟಿ, ರಮೇಶ್ ಮಂಜಿಲ, ಉಮೇಶ್ ಎಸ್.ಶೆಟ್ಟಿ, ರಾಘವೇಂದ್ರ ಭಟ್ ಮತ್ತಿತರರು ಇದ್ದರು.
ವಕೀಲ ಸುರೇಶ್ ಶೆಟ್ಟಿ ಪೂವಳ ಸ್ವಾಗತಿಸಿ, ಗಣೇಶ್ ಶೆಟ್ಟಿ ಗೋಳಿದೊಟ್ಟು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
