ಉಳ್ಳಾಲ: ಯುವಕನೋರ್ವ ಅಪ್ರಾಪ್ತೆ ಬಾಲಕಿ ಮತ್ತು ಯುವತಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಸೌಧದ ಬಳಿಯ ಮೂಡಿಜೇರ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದ್ದು, ಘಟನೆ ಸಂಬಂಧ ಸಾರ್ವಜನಿಕರು ಆರೋಪಿಯನ್ನು ಸ್ಥಳದಿಂದಲೇ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದು, ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಮಲಾರು ಮೊಹಿಯುದ್ದೀನ್ ಮಸೀದಿ ಬಳಿಯ ನಿವಾಸಿ ಖಲೀಲ್ (21) ಬಂಧಿತ.
IMG-20160219-WA0143
ಘಟನೆ ವಿವರ: ಮಂಗಳೂರಿನ ಶಾಲೆಯಿಂದ ವಾಪಸ್ಸಾಗಿದ್ದ 15ರ ಹರೆಯದ ಅಪ್ರಾಪ್ತೆ ಬಾಲಕಿ ಬಳಿಕ ಮನೆಯಿಂದ ಮುಲಾರದಲ್ಲಿರುವ ಬೀಡಿ ಬ್ರಾಂಚಿಗೆ ಬೀಡಿ ನೀಡಲೆಂದು ಹೋಗಿದ್ದಳು. ಅಲ್ಲಿಂದ ವಾಪಸ್ಸಾಗುವ ಸಂದರ್ಭ ಮೂಡಿಜೇರ ಸಮೀಪ ಖಲೀಲ್ ಹಿಂಬದಿಯಿಂದ ಬಂದು ಬಾಲಕಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದನು. ಗಾಬರಿಗೊಂಡ ಬಾಲಕಿ ಕಿರುಚಾಡಿ ಸ್ಥಳದಿಂದ ಓಡಿ ಪರಾರಿಯಾಗಿದ್ದಳು. ಸ್ವಲ್ಪ ಹೊತ್ತಿನಲ್ಲೇ 21 ರ ಹರೆಯದ ಯುವತಿಯೋರ್ವಳು ಅದೇ ರಸ್ತೆಯಲ್ಲಿ ತೆರಳುತ್ತಿದ್ದಾಗ ಆರೋಪಿ ಖಲೀಲ್ ಆಕೆಯ ಕೈಯನ್ನೂ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದನು. ಆಕೆಯೂ ಬೊಬ್ಬಿಟ್ಟು ಓಡುತ್ತಿರುವುದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಆರೋಪಿ ಖಲೀಲನನ್ನು ಸೆರೆಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ಖಲೀಲ್ ಹಳೇ ಟಿ.ವಿ ಮಾರಾಟದ ಕಸುಬು ಹೊಂದಿದ್ದ. ಶುಕ್ರವಾರ ಈ ಭಾಗದಲ್ಲಿ ಬಂದಿದ್ದನು. ಕೊಣಾಜೆ ಠಾಣೆಯಲ್ಲಿ ಖಲೀಲ್ ವಿರುದ್ಧ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆಯಿಂದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು.

By suddi9

Leave a Reply

Your email address will not be published. Required fields are marked *