ಹೋರಂಗಳ-ಲಕ್ಷ್ಮಿಕೋಡಿ ರಸ್ತೆ ತಡೆಬೇಲಿ ತೆರವು
ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮದ ಕೊಯಿಲ ಸಮೀಪದ ಹೋರಂಗಳ-ಲಕ್ಷ್ಮಿಕೋಡಿ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರು ಕಳೆದ ಹಲವು ಸಮಯದಿಂದ ಅಳವಡಿಸಿದ್ದ ತಡೆಬೇಲಿ ತೆರವುಗೊಳಿಸಿ ಸಾರ್ವಜನಿಕ ರಸ್ತೆ ನಿರ್ಮಿಸಲು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರು ಶುಕ್ರವಾರ ಸ್ಥಳೀಯರೊಂದಿಗೆ ನಡೆಸಿದ ಮಾತುಕತೆ ಕೊನೆಗೂ ಯಶಸ್ವಿಯಾಗಿದೆ.
ಇಲ್ಲಿನ ಸರ್ವೆ ನಂ.16/1ರ ಖಾಸಗಿ ಜಮೀನಿನಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಗೆ ಸ್ಥಳೀಯ ವ್ಯಕ್ತಿಯೊಬ್ಬರು ಕಬ್ಬಿಣದ ತಡೆಬೇಲಿ ನಿರ್ಮಿಸಿದ ಪರಿಣಾಮ ಇಲ್ಲಿಗೆ ಸಮೀಪದ ಲಕ್ಷ್ಮೀಕೋಡಿ, ಮೈಂದಬೆಟ್ಟು, ಮಾದಕೋಡಿ ಮತ್ತಿತರ ಪ್ರದೇಶದ ಸುಮಾರು 15ಕ್ಕೂ ಮಿಕ್ಕಿ ಮನೆಗಳಿಗೆ ಸಂಪರ್ಕ ಕಡಿತಗೊಂಡಿತ್ತು. ಈ ರಸ್ತೆಗೆ ತಾಗಿಕೊಂಡಂತೆ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರ ಕೌಟುಂಬಿಕ ಜಮೀನು ಕೂಡಾ ಇದ್ದು ಅವರು ಸ್ವತಃ ರಸ್ತೆಗೆ ಜಮೀನು ಬಿಟ್ಟು ಕೊಟ್ಟಿದ್ದರು. ಈ ರಸ್ತೆಗೆ ಅಡ್ಡವಾಗಿ ಖಾಸಗಿ ವ್ಯಕ್ತಿಯೊಬ್ಬರು ಅಳವಡಿಸಿದ ಕಬ್ಬಿಣದ ತಡೆಬೇಲಿ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ರಾಯಿ ಗ್ರಾಮ ಪಂಚಾಯಿತಿ ಸಹಿತ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಮಂಗಳೂರು ಸಹಾಯಕ ಆಯುಕ್ತರಿಗೆ ದೂರಿಕೊಂಡಿದ್ದರು. ಈ ಬಗ್ಗೆ ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಸ್ಥಳ ತನಿಖೆ ನಡೆಸಿ ಕಂದಾಯ ಇಲಾಖೆಗೆ ಮಾಹಿತಿ ಸಲ್ಲಿಸಿದ್ದರು. ಇದರಿಂದಾಗಿ ಈ ತಡೆಬೇಲಿ ತೆರವುಗೊಳಿಸಿ ಸಾರ್ವಜನಿಕ ರಸ್ತೆ ನಿರ್ಮಿಸುವ ಬಗ್ಗೆ ರಾಯಿ ಗ್ರಾಮ ಪಂಚಾಯಿತಿ ಕೂಡಾ ನಿರ್ಣಯ ಕೈಗೊಂಡಿತ್ತು. ಇದಕ್ಕಾಗಿ ಶುಕ್ರವಾರ ಭಾರೀ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿ ಆರಂಭಿಸಲು ಪಂಚಾಯಿತಿ ಪಿಡಿಒ ಸಹಿತ ಸದಸ್ಯರು ಮುಂದಾದ ವೇಳೆ ಜಮೀನುದಾರರು ಮತ್ತು ಇವರೊಂದಿಗೆ ಮತ್ತೆ ಪರಸ್ಪರ ಮಾತಿನ ಚಕಮಕಿ ಮತ್ತು ವಾಗ್ವಾದ ಉಂಟಾಯಿತು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಧಾವಿಸಿ ಸ್ಥಳೀಯರೊಂದಿಗೆ ಮಾತುಕತೆ ಮತ್ತು ಸಂಧಾನ ನಡೆಸಿದ ಬಳಿಕ ಜಮೀನುದಾರರಿಂದ ಮುಚ್ಚಳಿಕೆ ಬರೆಸಿಕೊಂಡು ಜೆಸಿಬಿ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಯಶಸ್ವಿಯಾಗಿ ಆರಂಭಿಸಲು ಸಾಧ್ಯವಾಗಿದೆ ಎಂದು ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಸಪಲ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಉಪಾಧ್ಯಕ್ಷೆ ಪುಷ್ಪಲತಾ, ಪಿಡಿಒ ವೆಂಕಟೇಶ್, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಸ್ಥಳೀಯ ಪ್ರಮುಖರಾದ ಆರ್.ರಮೇಶ ರಾವ್, ಆರ್.ಶ್ಯಾಮಪ್ರಸಾದ್ ರಾವ್, ದಿನೇಶ ಮೈಂದಬೆಟ್ಟು, ಉಮೇಶ ಹೋರಂಗಳ ಮತ್ತಿತರರು ಇದ್ದರು.
