ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಚಿನ್ನಾಭರಣ ಸಹಿತ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರಿಂದ ಕಾರು ಸಹಿತ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಡಂಕಾಪು ರೈಲ್ವೆ ಮೇಲ್ಸೇತುವೆ ಬಳಿ ಗುರುವಾರ ಸಂಜೆ ಕಾರು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇಲ್ಲಿನ ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿ ಗುತ್ತಿಗೆದಾರ ಮೋಹನ ಶೆಟ್ಟಿ ಎಂಬವರು ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಲಾಕರ್ನಲ್ಲಿಟ್ಟಿದ್ದ ರೂ 4ಲಕ್ಷ ಮೌಲ್ಯದ ಚಿನ್ನಾಭರಣವನ್ನು ಮಂಗಳವಾರ ಬೆಳಿಗ್ಗೆ ಹಿಂಪಡೆದು ರಸ್ತೆ ಬದಿ ಇರಿಸಿದ್ದ ತನ್ನ ಮಾರುತಿ ಸ್ವಿಫ್ಟ್ ಕಾರಿಗೆ ಏರುತ್ತಿದ್ದ ವೇಳೆ ದರೋಡೆ ನಡೆಸಲಾಗಿತ್ತು. ಸ್ಥಳೀಯ ಪೊನ್ನೋಡಿ ನಿವಾಸಿ ಸುಮಿತ್ ಆಳ್ವ ನೇತೃತ್ವದ ನಾಲ್ವರು ದುಷ್ಕರ್ಮಿಗಳ ತಂಡವು ತಳವಾರು ಮತ್ತು ದೊಣ್ಣೆ ಸಹಿತ ಏಕಾಯೇಕಿ ಕಾರಿಗೆ ಮುಗಿ ಬಿದ್ದು ಗುತ್ತಿಗೆದಾರರಿಗೆ ಜೀವ ಬೆದರಿಕೆಯೊಡ್ಡಿ ಬಳಿಕ ಅವರ ಕಾರು ಸಹಿತ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದೆ ಎಂದು ಆರೋಪಿಸಿದ್ದರು. ಈ ಕಾರಿನಲ್ಲಿ ಹವಳ ಮತ್ತು ಚಿನ್ನದ ಎರಡು ನೆಕ್ಲೆಸ್ ಮತ್ತು ನಾಲ್ಕು ಬಳೆ ಮತ್ತಿತರ ಚಿನ್ನಾಭರಣ ಮಾತ್ರವಲ್ಲದೆ ಕಾರು ಮತ್ತು ತೆರಿಗೆಗೆ ಸಂಬಂಧಿಸಿದವಿವಿಧ ದಾಖಲೆ ಪತ್ರಗಳಿದ್ದವು ಎಂದು ಅವರು ನಗರ ಠಾಣೆ ಪೊಲೀಸರಿಗೆ ದೂರಿಕೊಂಡಿದ್ದರು.
ಆರೋಪಿ ಸುಮಿತ್ ಆಳ್ವ ಬೇರೊಬ್ಬರಿಗೆ ನೀಡಿದ ಬಡ್ಡಿ ಹಣಕಾಸಿಗೆ ಸಂಬಂಧಿಸಿದಂತೆ ಇವರಿಗೆ ಯಾವುದೇ ರೀತಿಯ ಸಂಬಂಧ ಇಲ್ಲದಿದ್ದರೂ ಈ ದರೋಡೆ ನಡೆಸಲಾಗಿದ್ದು, ಆರೋಪಿ ವಿರುದ್ಧ ಈಗಾಗಲೇ ಕೊಲೆಯತ್ನ ಪ್ರಕರಣವೂ ದಾಖಲಾಗಿದೆ. ಈಗಾಗಲೇ ಕೈಕಂಬದಲ್ಲಿರುವ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಗುತ್ತಿಗೆದಾರರು ಚಿನ್ನಾಭರಣ ವಾಪಾಸು ಪಡೆದಿರುವ ಬಗ್ಗೆ ವಿವಿಧ ದಾಖಲೆಪತ್ರಗಳನ್ನು ಬಂಟ್ವಾಳ ಕ್ರೈಂ ಇನ್ಸ್ಪೆಕ್ಟರ್ ಗಂಗಾಧರಪ್ಪ, ಎಎಸೈ ಸಂಜೀವ ಮತ್ತಿತರ ಪೊಲೀಸರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.
