ಮಂಗಳೂರು: ಮಂದಿರ, ಮಸೀದಿ, ಇಗರ್ಜಿ ಕಟ್ಟುವ ಬದಲು ಊರಿನಲ್ಲಿ ಶಾಲೆಯನ್ನು ಕಟ್ಟುವ ಕೆಲಸಕ್ಕೆ ಯುವಮನಸ್ಸುಗಳು ಪ್ರೇರಣೆಯಾಗಬೇಕು. ಶಾಲೆಯೊಂದು ತೆರೆದರೆ ಇಡೀ ಊರಿಗೆ ಊರೇ ಅಭಿವೃದ್ಧಿಯ ಪಥದಲ್ಲಿ ನಡೆಯಲು ಸಹಕಾರಿಯಾಗುತ್ತದೆ’ ಹೀಗೆಂದು ಅಭಿಪ್ರಾಯಪಟ್ಟವರು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಅವರು.
ಚೇಳಾರು ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಯೋಧ ಚೇಳಾರುಗುತ್ತು ಎಸ್.ಆರ್.ಹೆಗ್ಡೆ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತಾಡುತ್ತಾ ವಿವೇಕ್ ರೈ ಅವರು ಹೀಗೆ ಹೇಳಿದರು. ಎಸ್.ಆರ್.ಹೆಗ್ಡೆ ಅವರಂಥ ಧೀಮಂತ ವ್ಯಕ್ತಿ ನಮಗೆ ಕಾಣಲು ಸಿಗುವುದೇ ಅಪರೂಪ. ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಹೆಗ್ಡೆ ಅವರು ಆನಂತರ ತನ್ನೂರಿನ ಶಾಲೆಯಲ್ಲಿ ಅತಿಥಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದರ ಜೊತೆ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದರು ಎಂದು ರೈ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಅಭಯಚಂದ್ರ ಜೈನ್ ಅವರು ನೆರವೇರಿಸಿದರು. ಇಂಡಿಯನ್ ವೈಟ್ ಲಿಫ್ಟಿಂಗ್ ಅಸೋಸಿಯೇಶನ್ ಇದರ ಗೌರವ ಕಾರ್ಯದರ್ಶಿ ಚಂದ್ರಹಾಸ ರೈ, ಚೇಳಾರು ಕಾಲೇಜ್ ಪ್ರಾಂಶುಪಾಲೆ ಕುಶಾರತಿ, ಚೇಳಾರು ಪ್ರಾಥಮಿಕ ಶಾಲೆ ಪ್ರಾಂಶುಪಾಲೆ ಕೃಷ್ಣವೇಣಿ, ದಿ.ಎಸ್.ಆರ್.ಹೆಗ್ಡೆ ಅವರ ಪತ್ನಿ ಇಂದಿರಾ ಹೆಗ್ಡೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



