ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿಸಿರಿ-2015 ವಿದ್ಯಾರ್ಥಿ ಸಾಹಿತ್ಯ-ಸಂಸ್ಕ್ರತಿ ಸಮ್ಮೇಳನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಪಿ.ಶೇಷಾದ್ರಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ವಿದ್ಯೆ ಬೆಳಕು. ಸೃಜನಶೀಲತೆ, ಕ್ರೀಯಾಶೀಲತೆಯೊಂದಿಗೆ ಈ ಬೆಳಕಲ್ಲಿ ಮಿಂದೆದರೆ ಜೀವನ ಪಾವನವಾಗುತ್ತದೆ. ಚಿಂತನಶೀಲತೆ ವಿದ್ಯಾರ್ಥಿಗಳಲ್ಲಿರಬೇಕು. ಇಂದು ವಿವಿಧ ಮೂಲಗಳಿಂದ ನಮಗೆ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತದೆ. ತಂತ್ರಜ್ಞಾನದ ಬಳಕೆಯೂ ಸುಲಭವಾಗಿದೆ. ಈ ತಂತ್ರಜ್ಞಾನಗಳ ಮೂಲಕ ಸಿಗುವ ಮಾಹಿತಿಯೇ ಇಂದು ನಮ್ಮ ದಾರಿ ತಪ್ಪಿಸುತ್ತಿದೆ. ತಂತ್ರಜ್ಞಾನವನ್ನು ಎಚ್ಚರಿಕೆಯೊಂದಿಗೆ ಬಳಸಬೇಕಾಗಿದೆ. ಸ್ವಾರಸ್ಯಕರ ಜೀವನಕ್ಕೆ ಸಂಶೋಧನಾತ್ಮಕ ಅಚ್ಚರಿಯೂ ಅಗತ್ಯ ಎಂದುಅಭಿಪ್ರಾಯಪಟ್ಟರು.
ನನ್ನನ್ನು ಯಾವುದೇ ಅಸಹಿಷ್ಣುತೆ ಕಾಡುತ್ತಿಲ್ಲ. ಆದರೆ ದ.ಕ ಜಿಲ್ಲೆಯ ಬಿಸಿಲಿನ ಉಷ್ಣತೆಯನ್ನು ನನ್ನನು ಹೆಚ್ಚು ಕಾಡುತ್ತಿದೆ ಎಂದು ಹಾಸ್ಯ ಮಾತುಗಳನ್ನಾಡಿದ ಶೇಷಾದ್ರಿಯವರು, ಅಸಹಿಷ್ಣುತೆ ಬಗ್ಗೆ ಮಾತನಾಡುವವರು ತಾವು ಯಾವ ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಮ್ಮ ಭಾಷೆ, ಸಂಸ್ಕøತಿಯತ್ತ ಮನಸ್ಸನ್ನು ತಲುಪಿಸಬೇಕು .ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ಮಾಡುವಂತಹ ಪರಿಸ್ಥಿತಿಯಿದೆ. ನಮ್ಮ ನಾಡು-ನುಡಿಯ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕಾಗಿದೆ ಎಂದರು.
ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ ಪ್ರದಾನ:
ಸಾಗರದ ಕಿನ್ನರಿ ಮೇಳ ತುಮರಿ ತಂಡಕ್ಕೆ ನೀಡಲಾದ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಅದರ ನಿರ್ದೇಶಕ ಕೆ.ಜಿ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ತಿಪಟೂರು, ಗಾಯಕ ಗಗನ್ ಜಿ.ಗಾಂವ್ಕರ್ ಅವರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಬಾಲ ಪ್ರತಿಭೆ ಪಂಚಮಿ ಮಾರೂರು ಅವರಿಗೆ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಗಗನ್ `ಮುಚ್ಚಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಅಂತರಾತ್ಮ’ ಎಂಬ ಗೀತೆಯನ್ನು ಹಾಡಿದರು.
ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಮೋಘ ಹೆಗ್ಡೆ ಅವರ `ಮುತ್ತುಚಿಪ್ಪು’ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಲೋಕಾರ್ಪಣೆಗೊಳಿಸಿದರು.
ಕನ್ನಡ ಅನುಷ್ಠಾನಕ್ಕೆ ಸಮಾಜದ ಹಕ್ಕೊತ್ತಾಯದ ಅವಶ್ಯ
ಸಮ್ಮೇಳನದ ಸರ್ವಾಧ್ಯಕ್ಷೆ ಶಾಲಿಕಾ ಎಕ್ಕಾರು ತಮ್ಮ ಅಧ್ಯಕ್ಷೀಯ ಭಾಷಣದ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾತನಾಡಿದರು.
ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕನ್ನಡಪರ ದೃಷ್ಠಿಕೋನ ಕ್ಷೀಣವಾಗುತ್ತಿದೆ. ಕನ್ನಡವನ್ನು ಉಳಿಸುವ ಬೆಳೆಸುವ ಆಸಕ್ತಿ ಮೂಡಿಸುವ, ಪರಿಸರ ನಿರ್ಮಾಣದ ಬಗ್ಗೆ ನಾವೆಲ್ಲ ಯೋಚಿಸಬೇಕಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಾರ್ಯಕ್ರಮ ನಡೆಸುವ ಕುರಿತಾಗಿ ಸರ್ಕಾರ ಹಾಗೂ ಕನ್ನಡಪರ ಸಂಸ್ಥೆಗಳ ಮಟ್ಟದಲ್ಲಿ ಚರ್ಚೆಗಳಾಗಬೇಕಾಗಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಖಚಿತ ಮಾರ್ಗದರ್ಶನ ಮಾಡಬೇಕಾಗಿದೆ. ಆಂಗ್ಲ ಮಾಧ್ಯಮಗಳಲ್ಲಿ ಕನ್ನಡದ ಅನುಷ್ಠಾನದ ಕುರಿತಾಗಿ ಸಮಾಜವು ಹಕ್ಕೊತ್ತಾಯದ ಅನಿವಾರ್ಯತೆಯಿದೆ. ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದಲ್ಲದೇ ಕನ್ನಡ ಕಲಿಕೆಯ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ವಿಶ್ವಾಸವನ್ನು ಮೂಡಿಸುವ ಚಟುವಟಿಕೆಗಳನ್ನು ರೂಪಿಸಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಎಲ್ಲಾ ಹಂತದಲ್ಲೂ ಕನಿಷ್ಠ ಒಂದು ಭಾಷೆಯಾನ್ನಾಗಿಯಾದರೂ ಕಡ್ಡಾಯವಾಗಿ ಅನುಷ್ಠಾನಗೊಳಿಸುವತ್ತ ಸರ್ಕಾರ, ಸಮಾಜ ದೃಢ ಸಂಕಲ್ಪ ಮಾಡಬೇಕಾಗಿದೆ
ಮಕ್ಕಳು ಸಹಿಷ್ಣುತೆ ಕಲಿಯುವ ವಾತಾವರಣ ಅವಶ್ಯಕತೆಯೂ ಇದೆ. ವಿದ್ಯಾರ್ಥಿಸಿರಿಯಂತಹ ಸಮ್ಮೇಳನವು ಮಕ್ಕಳು, ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಕನಸನ್ನಯ ಬಿತ್ತಲಿ ಎಂದು ಆಶಯ ವ್ಯಕ್ತಪಡಿಸಿದರು.
ಉಡುಪಿ ಕಿದಿಯೂರು ಶ್ಯಾಮಿಲಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ವಿಜೇತ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಸುಶಾಂತ್ ಮುಂಗರವಳ್ಳಿ ನಿರೂಪಿಸಿದರು. ಮೂಡುಬಿದರೆ ಜೈನ ವಿದ್ಯಾಸಂಸ್ಥೆಯ ಐಶ್ವರ್ಯ ಜೈನ್ ವಂದಿಸಿದರು.






