ಶಿಲ್ಪಗಳಲ್ಲಿ ಶೈಕ್ಷಣಿಕ ಕಾಯಕಲ್ಪ ಬಣ್ಣಗಳಲ್ಲಿ ಶಿಕ್ಷಣ ಜನಜೀವನ
ಮೂಡುಬಿದರೆ: ನಾಡು-ನುಡಿಯ ಮಾದರಿ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಉದ್ಘಾಟನಾ ಸಮಾರಂಭ ನಡೆಯುವ ಪುತ್ತಿಗೆಪದವಿನ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಶಾಲೆಯ ಕಲಾತ್ಮಕ ಕ್ಯಾಂಪಸ್ ಆಗಿ ರೂಪುಗೊಂಡಿದೆ. ಶಿಕ್ಷಣ, ಜನಜೀವನವನ್ನು 31 ಜನ ಕಲಾವಿದರು ತಮ್ಮ ಕುಶಲತೆ, ಕುಂಚಗಳಿಂದ ಕಲೆಗಿಳಿಸಿದ್ದಾರೆ.

ಶಿಲ್ಪಕಲೆಯಲ್ಲಿ ಶಿಕ್ಷಣ:
ಶೈಕ್ಷಣಿಕ ಕೇಂದ್ರವಾಗಿರುವ ಆಳ್ವಾಸ್ ಶಾಲೆಯಲ್ಲಿ ಕಲಾವಿದರು ಶಿಲ್ಪಕಲೆಯ ಮುಖಾಂತರ ಶಿಕ್ಷಣದ ಮಹತ್ವ, ಬದಲಾವಣೆ, ತಂತ್ರಜ್ಞಾನದ ಆಕರ್ಷಣೆಯಲ್ಲಿ ಶಿಕ್ಷಣ..ಹೀಗೆ ಹಲವು ರೂಪಗಳಲ್ಲಿ ಶಿಕ್ಷಣವನ್ನು ವ್ಯಾಖ್ಯಾನಿಸಿದ್ದಾರೆ. ಟ್ಯಾಬ್ ಮೂಲಕ ಶಿಕ್ಷಣ, ತಾಯಿಯಿಂದ ಶಿಕ್ಷಣ, ಪುಸ್ತಕದ ಕಡೆಗಣನೆ, ಮಸ್ತಕದಲ್ಲಿ ಪುಸ್ತಕ-ಅಲ್ಲಿಂದಲ್ಲೇ ಜ್ಞಾನ ತಂತ್ರಜ್ಞಾನ, ಪೆನ್ಡ್ರೈವ್ ಶಿಕ್ಷಣ-ವಿದ್ಯಾರ್ಥಿಗಳಿಗೆ ಕೊಂಡಿಯಾಗುವ ದಿನಗಳ ಕಲ್ಪನೆಯೂ ಕಲಾವಿದರ ಶಿಲ್ಪಕಲೆಗಳ ಮೂಲಕ ಅನಾವರಣಗೊಂಡಿದೆ. 11 ಮಂದಿ ಕಲಾವಿದರು ಸಿಮೆಂಟ್, ಕಬ್ಬಿಣದ ಸರಳುಗಳನ್ನು ಬಳಸಿ ತಮ್ಮ ಶಿಲ್ಪಕಲಾಕೃತಿಗಳನ್ನು ರಚಿಸಿದ್ದಾರೆ.
ಅಕ್ಷಯ ಕುಮಾರ್ ಮೈಸೂರು, ಬೆಂಗಳೂರಿನ ಅನಿಲ್, ಕಲಬುರ್ಗಿಯ ರಾಜ್ಕುಮಾರ್ ಶಿವಮೊಗ್ಗದ ಶಂಕರ್ ಕೆ, ಬಾಗಲಕೋಟೆಯ ಆನಂದ ರಾಚಪ್ಪ ಬಿಲಗಿ ಮತ್ತು ಉಡುಪಿ ಕೋಟೆಶ್ವರದ ಚಂದ್ರಶೇಖರ ಶಿಬಿರದಲ್ಲಿ ಕಲಾಕೃತಿಯನ್ನು ರಚಿಸಿದ್ದಾರೆ.
ಕುಂಚದಲ್ಲಿ ಪ್ರಪಂಚ:
ವ್ಯಕ್ತಿ, ಸಮಾಜ, ಶಿಕ್ಷಣ, ಜನಪದ, ಸಮಕಾಲೀನ ಜೀವನ, ಲ್ಯಾಂಡ್ ಸ್ಕೇಪ್ ಹೀಗೆ ಹಲವು ವಿಷಯಗಳನ್ನು ಶಿಬಿರವೊಂದರಲ್ಲಿ ವ್ಯಕ್ತಗೊಳಿಸಿದ್ದು ರಾಜ್ಯದ 20 ಮಂದಿ ಕಲಾವಿದರು, ಅದೂ ಆಳ್ವಾಸ್ ಚಿತ್ರಸಿರಿ 2015 ರಾಜ್ಯಮಟ್ಟದ ಕಲಾಶಿಬಿರದಲ್ಲಿ. 4 ದಿನಗಳಲ್ಲಿ ಈ ಕಲಾವಿದರು 50ರಷ್ಟು ಕಲಾಕೃತಿಗಳನ್ನು ರಚಿಸಿದ್ದಾರೆ. ಅಂತಾರಾಷ್ಟ್ರೀಯ-ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಾಡಿನ ಚಿತ್ರಕಲಾವಿದರು ಶಿಬಿರದಲ್ಲಿ ಭಾಗವಹಿಸಿದರು.
ಬೆಳಗಾವಿಯ ಚಿತ್ರಕಲಾವಿದ ದಿಲೀಪ್ ಕುಮಾರ್ ಕಾಳೆ ಅವರು ಜನಪದೀಯ ಶೈಲಿಯಲ್ಲಿ ರಾಧಕೃಷ್ಣ ಹಾಗೂ ಸಖೀಯರ ಚಿತ್ರ ಬಿಡಿಸಿದ್ದಾರೆ. ದಿಲೀಪ್ ಅವರ ಪತ್ನಿ ಮಾಧುರಿ ಪಿ.ದೊಡ್ಡಮನಿಯವರು ಕೂಡಾ ಈ ಚಿತ್ರಸಿರಿಯಲ್ಲಿ ಭಾಗವಹಿಸಿ ಹೆಣ್ಣನ್ನು ಹೂವಿಗೆ ಹೋಲಿಸಿ ಚಿತ್ರಗಳನ್ನು ರಚಿಸಿದ್ದಾರೆ. ಈ ದಂಪತಿಯ ಮಗಳು ಕೂಡ ಚಿತ್ರವೊಂದನ್ನು ರಚಿಸಿ, ಚಿತ್ರಸಿರಿಯ ಸಮಾರೋಪ ಸಮಾರಂಭದಲ್ಲಿ ಶಿಬಿರದ ರೂವಾರಿ ಡಾ.ಎಂ.ಮೋಹನ ಆಳ್ವರಿಗೆ ನೀಡಿದ್ದಾಳೆ.
ಹಾವೇರಿಯ ಕರಿಯಪ್ಪ ಹಂಚಿನಮನಿ ಜನಪದ ಕಲೆ, ಜೀವನವನ್ನು ಬಿಂಬಿಸುವ ಮೂರು ಚಿತ್ರಗಳನ್ನು ಬಿಡಿಸಿದ್ದಾರೆ.ಕಾಸರಗೋಡಿನ ವಿಲ್ಸನ್ ಜೆ.ಪಿ ಡಿಸೋಜ ಅವರು ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ಟಂತೆ ಹುಡುಗಿಯರ ಹಾಸ್ಟೆಲ್ ಜೀವನ, ಓದಿನ ಜತೆಗೆ ನಮ್ಮ ದೇಶದ ಸಂಸ್ಕøತಿಯನ್ನು ಬಿಂಬಿಸುವ ಚಿತ್ರ, ಮೈಸೂರಿನ ಭರತ್ ಕುಮಾರ್ ಅವರು ಪ್ರಕೃತಿ ಮತ್ತು ಪುಣ್ಯಕೋಟಿಯ ಜೀವನ ಚರಿತ್ರೆಯನ್ನು, ಬೆಂಗಳೂರಿನ ಕುಲಕರ್ಣಿ ಅವರು ದನಗಳ ಚಿತ್ರಗಳನ್ನು, ಉಡುಪಿಯ ಶರತ್ ಕುಮಾರ್ ಎಲ್ ಅವರು ತಾಯಿ ಮಗುವಿನ ಚಿತ್ರಗಳ ಚಿತ್ತಾರವನ್ನು ಬಿಡಿಸಿದ್ದಾರೆ. ಅಲ್ಲದೆ ದಾವಣಗೆರೆಯ ಅಚ್ಚುತ್ತನ್ ಡಿ.ಕೆ, ತುಮಕೂರಿನ ಬಸವರಾಜು ಕೆ.ಎಸ್, ದಾರವಾಡದ ದಯಾನಂದ ಕೆ.ಕಮಾಕರ್, ಗದಗದ ಕಮಲ್ ಅಹಮದ್ ಎಮ್, ದ.ಕ ದ ಲಾಲ್ ಮೋಹನ್, ತುಮಕೂರಿನ ಮಲ್ಲಪ್ಪ ಹಳ್ಳಿ, ಉತ್ತರ ಕನ್ನಡದ ಪ್ರಕಾಶ್ ಜಿ.ನಾಯಕ್, ರಾಯಚೂರಿನ ಪ್ರಮೋದ್ ಕುಮಾರ್, ಮಂಡ್ಯದ ಸಂತೋಷ್ ಕುಮಾರ್, ರಾಯಚೂರಿನ ಶಹನಾಜ್ ಸುಲ್ತಾನ್, ಕಲ್ಬುರ್ಗಿಯ ಸುಪ್ರೀಯ ಮತ್ತು ದಾರವಾಡದ ವಿರೇಶ್ ಎಸ್. ಪಾತಾಳಿ ಅವರು ಈ ಚಿತ್ರಸಿರಿಯಲ್ಲಿ ಭಾಗವಹಿಸಿ ಉತ್ತಮ ಚಿತ್ರಗಳನ್ನು ಅರಳಿಸಿ ಗಮನ ಸೆಳೆದಿದ್ದಾರೆ.
ಮಂಡ್ಯದ ಅಕ್ಷಯ ಕುಮಾರ್ ಚಿಂದಿ ಆಯುವ ಬಾಲಕನ ಚಿತ್ರದ ಚಿತ್ರಣವನ್ನು ತನ್ನ ಕಲಾಕೃತಿಯ ಮೂಲಕ ತೋರಿಸಿದ್ದಾರೆ. ಹಾವೇರಿಯ ಮಂಜುನಾಥ್ ಟಿ.ಕೆ ಅವರು ಸರಸ್ವತಿಯ ಕೈಯಲ್ಲಿ ಪುಸ್ತಕದ ಕಲಾಕೃತಿಯನ್ನು ಬಿಡಿಸಿ ಅದರ ಮುಂದೆ ಬಾಲಕನೋರ್ವ ನಿಂತು ನೋಡುವ ಕಲಾಕೃತಿಯನ್ನು ರಚಿಸಿದ್ದಾರೆ. ನಾವು ದೇವರನ್ನು ಹೇಗೆ ಭಯ ಭಕ್ತಿಯಿಂದ ಪೂಜಿಸುತ್ತೆವೆಯೋ ಅದೇ ರೀತಿ ನಾವು ವಿದ್ಯೆಯನ್ನೂ ಕಲಿಯಬೇಕೆಂಬ ಸಂದೆಶವನ್ನು ನೀಡಿದ್ದಾರೆ. ಬೀದರಿನ ಪ್ರಕಾಶ್ ಉಮರಗೆ ಅವರು ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು, ವಿದ್ಯೆಯೊಂದಿದ್ದರೆ ಯಾವುದೇ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದೆನ್ನುವ ಸಂದೇಶವನ್ನು ನೀಡಿದ್ದಾರೆ. ಅದರಂತೆ ದಾವಣಗೆರೆಯ ವೆಂಕಟೇಶ್ ಅವರು ಪುಸ್ತಕಗಳಿಲ್ಲದೆ ಟ್ಯಾಬ್, ಪೆನ್ಡ್ರೈವ್ ಮೂಲಕನೇ ಮಕ್ಕಳಿಗೆ ಮುಂದೊಂದು ದಿನ ಸಿಗುವ ಶಿಕ್ಷಣದ ಬಗ್ಗೆ ತನ್ನ ಕಲಾಕೃತಿಯನ್ನು ಬಿಂಬಿಸುವ ಮೂಲಕ ಹೆಚ್ಚಿನ ಕಲಾವಿದರು ಶಾಲೆಯ ಆವರಣಕ್ಕೆ ಮತ್ತು ಮಕ್ಕಳ ಮನಸ್ಥಿತಿಗೆ ಬೇಕಾದಂತಹ ಶಿಲ್ಪಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.






