ಮೂಡುಬಿದಿರೆ: ಎಲ್ಲಿ ನೋಡಿದರಲ್ಲಿ ಹೊಂಡಗಳದ್ದೇ ಕಾರುಬಾರು. ಮಳೆಗಾಲ ಮಾತ್ರವಲ್ಲ ಬೇಸಿಯಲ್ಲೂ ಇಲ್ಲಿ ಸಂಚರಿಸುವುದು, ನಡೆದಾಡುವುದು ತ್ರಾಸದ ಕೆಲಸ. 2 ಕಿ.ಮೀ ರಸ್ತೆ ಸಂಚರಿಸಿದರೆ, 10 ಕಿ.ಮೀ ಸಂಚರಿಸಿದ ಅನುಭವ. ಇದ್ಯಾವುದೋ ತೀರ ಕುಗ್ರಾಮದಲ್ಲಿರುವ ರಸ್ತೆಯಲ್ಲ. ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಡ್ಕದಿಂದ ಪಡುಮರ್ನಾಡು ಗ್ರಾ.ಪಂ ಕಚೇರಿತ್ತ ತೆರಳುವ ರಸ್ತೆಯ ದುರವಸ್ಥೆಯಿದು.
ನಗರ ಪ್ರದೇಶದಿಂದ ಕೆಲವೇ ಕಿ.ಮೀ ದೂರವಿರುವ ಈ ರಸ್ತೆ, ಅದರಲ್ಲೂ ಮೂಡುಬಿದರೆ ಪೇಟೆ ಹಾಗೂ ಪಡುಮರ್ನಾಡು ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸುವ ರಸ್ತೆ ಇಂತಹ ಅವವ್ಯಸ್ಥೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂತಹ ಹಲವಾರು ಪ್ರಶ್ನೆಗಳೊಂದಿಗೆ ಇಲ್ಲಿನ ಕಳೆದ 5 ವರ್ಷಗಳಿಂದ ರಸ್ತೆ ದುರಸ್ತಿ ಮಾಡುವಂತೆ ಪಂಚಾಯಿತಿಗೆ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಗ್ರಾಮಸಭೆ ಹಾಗೂ ಅವಕಾಶ ಸಿಕ್ಕಿದಾಗಲೆಲ್ಲ ರಸ್ತೆ ದುರಸ್ತಿ ಮಾಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಅನುದಾನದ ಕೊರತೆ, ಶಾಸಕರು ಹಾಗೂ ಇತರ ಪ್ರತಿನಿಧಿಗಳಿಂದ ಸಕಾಲದಲ್ಲಿ ಸಿಗದ ಸ್ಪಂದನೆಯಿಂದ ರಸ್ತೆ ದುರಸ್ತಿಯ ಭಾಗ್ಯ ಇಲ್ಲಿಯವರೆಗೆ ಕಂಡಿಲ್ಲ.

Padumarnadu Road (2)

Padumarnadu Road (3)

Padumarnadu Road (4)

Padumarnadu Road (5)
ಪಂಚಾಯಿತಿ ರಸ್ತೆಯಲ್ಲಿ ಹೊಂಡಗಳು ತಾಂಡವಾಡುತ್ತಿದ್ದು ಪಂಚಾಯಿತಿಯಿಂದ ಸುಮಾರು 200 ಮೀ ಅಂತರದಲ್ಲಿರುವ ಸುಮಾರು 100ಮೀ ರಸ್ತೆ ಇನ್ನೂ ಡಾಮರೀಕರಣ ಮುಖ ಕಂಡಿಲ್ಲ. ಈ ಮಣ್ಣಿನ ರಸ್ತೆಯಿಂದ ಪುನಃ ಡಾಮರಿನ ರಸ್ತೆಯಿದೆ. ಆದರೆ ದುರಸ್ತಿ ಕಾಣದೇ ಆ ಕಡೆ ಮಣ್ಣಿನ ರಸ್ತೆಯೂ ಅಲ್ಲ, ಈ ಕಡೆ ಡಾಮರು ರಸ್ತೆಯೂ ಅಲ್ಲ ಎನ್ನುವ ಅರಬರೆ ಸ್ಥಿತಿಯಲ್ಲಿದೆ.
ಬನ್ನಡ್ಕ-ಅಚ್ಚರಿಕಟ್ಟೆ ರಸ್ತೆ ದುರಸ್ತಿಗೆ ಅಚ್ಚರಿಕಟ್ಟೆವರೆಗಿನ ರಸ್ತೆ ಇಲಾಖೆಗೆ ವಿವಿಧ ಇಲಾಖೆಗಳಿಂದ ಒಟ್ಟು 9 ಲಕ್ಷ ಅನುದಾನ ಬಂದಿದೆ. ಸಂಸದರ ನಿಧಿಯಿಂದ 5 ಲಕ್ಷ, ಶಾಸಕರನ ನಿಧಿಯಿಂದ 2 ಲಕ್ಷ, ಜಿಲ್ಲಾ ಪಂಚಾಯಿತಿಯಿಂದ 1.5 ಲಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಜಂಟಿಯಾಗಿ ನರ್ಮ್ ಯೋಜನೆ ಮೂಲಕ 2 ಲಕ್ಷ ರಸ್ತೆ ಅಭಿವೃದ್ಧಿಗೆ ಬಂದಿದೆ. ಇದರಿಂದ ಸಂಪೂರ್ಣವಾಗಿ ರಸ್ತೆ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಈಗ ಲಭಿಸಿದ ಒಟ್ಟು 9 ಲಕ್ಷ ರೂ. ಅನುದಾನದಲ್ಲಿ ಇನ್ನೆರಡು ತಿಂಗಳೊಳಗೆ ಕೆಲಸ ಪ್ರಾರಂಭಿಸುತ್ತೇವೆ. ಮುಂದೆ ಸಿಗುವ ಅನುದಾನವನ್ನು ರಸ್ತೆ ಕಾಮಗಾರಿಗೆ ಮೀಸಲಾರಿಸಿ ಸಂಪೂರ್ಣವಾಗಿ ದುರಸ್ತಿಗೊಳಿಸುತ್ತೇವೆ ಎಂದು ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ ಭರವಸೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *