ರಾಜ್ಯದಲ್ಲಿ ಕೃಷಿಯೇತರ ಭೂಮಿಯ ನೋಂದಾವಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದಿಂದ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಸಮಸ್ಯಾತ್ಮಕ ಜಿಲ್ಲೆಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಹೆಚ್.ಕೆ ಪಾಟೀಲ್ ರವರ ಹೇಳಿಕೆ ಹಾಸ್ಯಾಸ್ಪದ ಮತ್ತು ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹತ್ತಿರ ಬಂದಾಗ ಸಾರ್ವಜನಿಕರನ್ನು ವಂಚಿಸುವ ಹುನ್ನಾರವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರೀಣಿ ಸದಸ್ಯ ಹಾಗೂ ಮಾಜಿ ಶಾಸಕರಾದ ಶ್ರೀ ಮೋನಪ್ಪ ಭಂಡಾರಿಯವರು ತಿಳಿಸಿರುತ್ತಾರೆ.
ಕಳೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಇ-ಸ್ವತ್ತು (9 ಮತ್ತು 11) ಕಡ್ಡಾಯಗೊಳಿಸಿದ ಬಗ್ಗೆ ರಾಜ್ಯ ವ್ಯಾಪ್ತೀ ಚರ್ಚೆ ನಡೆದಾಗ, ರಾಜ್ಯ ಸರಕಾರದ ದ.ಕ ಜಿಲ್ಲೆಯ ಮಂತ್ರಿಗಳು ಹಾಗೂ ಶಾಸಕರುಗಳು ನೀಡಿದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ನಾನು ಹೇಳಿಕೆ ಮೂಲಕ ನೀಡಿದಾಗ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿ’ಸೋಜರವರು ಸದ್ರಿ ಇ-ಸ್ವತ್ತು ಕಡ್ಡಾಯಗೊಳಿಸಿದ ಆದೇಶವನ್ನು ತೆಗೆದು ಹಾಕಲಾಗಿದೆ. ಅದರಿಂದ ಜನರಿಗೆ ಯಾವುದೇ ತೊಂದರೆ ಇಲ್ಲ, ಜನರು ತಮ್ಮ ತಮ್ಮ ಆಸ್ತಿಗಳನ್ನು ಯಾವುದೇ ಅಡಚಣೆ ಇಲ್ಲದೆ ನೋಂದಾಯಿಸಿಕೊಳ್ಳಬಹುದು ಎಂದು ಹೇಳಲಾದ ಕೆಲವೊಂದು ಆದೇಶ ಪತ್ರಗಳನ್ನು ನನಗೆ ಕಳುಹಿಸಿಕೊಡಲಾಗಿದೆ ಅದಕ್ಕೆ ಉತ್ತರವನ್ನು ತಕ್ಷಣ ನೀಡಬೇಕು ಎಂಬಿತ್ಯಾದಿಯಾಗಿ ಹೇಳಿಕೆ ನೀಡಿದ್ದು, ಈಗ ಸರಕಾರವು ಸದ್ರಿ 2013ರ ಆಗಸ್ಟ್‍ನ ಆದೇಶದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು ಜಿಲ್ಲೆಗಳಲ್ಲಿ ಆಸ್ತಿ ನೋಂದಾವಣಿ ಸ್ಥಗಿತಗೊಂಡಿದೆ ಎಂದು ಹೇಳಿದ ಹೇಳಿಕೆಯ ಅರ್ಥವೇನು?
ನಾನು ಈ ಹಿಂದೆ ಹೇಳಿದ ಹೇಳಿಕೆಯು ಸತ್ಯವೆಂದು ಸ್ಪಷ್ಟವಾಯಿತಲ್ಲವೆ! ಒಂದು ವೇಳೆ ಅದು ಶ್ರೀ ಐವನ್ ಡಿ’ಸೋಜರವರು ಹೇಳಿದ ಹಾಗೆ ಅಸತ್ಯವಾದ್ದಲ್ಲಿ ಈಗ ಮಂತ್ರಿಯವರ ಹೇಳಿಕೆ ಹಾಗೂ ಸರಕಾರದ ನಿರ್ಧಾರ ಸುಳ್ಳೇ. ಈ ಬಗ್ಗೆ ಶ್ರೀ ಐವನ್ ಡಿ’ಸೋಜ ವಾಸ್ತವ ಸಂಗತಿಯ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟೀಕರಣ ನೀಡಬೇಕು ಹಾಗೂ ತಾನು ಹಿಂದೆ ಹೇಳಿದು ಸುಳ್ಳು ಎಂದು ಒಪ್ಪಿಕೊಳ್ಳಲಿ.
ಈಗ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ಓಟಿಗಾಗಿ ಸದ್ರಿ ಇ-ಸ್ವತ್ತಿನ ಆದೇಶ ಪ್ರಸ್ತುತವೂ ಜಾರಿಯಲ್ಲಿದ್ದರೂ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಿ, ಸರಿಪಡಿಸುವ ನಿರ್ಧಾರ ಎಂದು ಹೇಳಿಕೆ ನೀಡಿ ಸಾರ್ವಜನಿಕರನ್ನು ಹಾದಿ ತಪ್ಪಿಸುವಂತೆ ಮಾಡಿ, ಜನರಿಗೆ ವಂಚನೆ ಮಾಡುವಂತ ಹುನ್ನಾರವನ್ನು ಸರಕಾರವು ಮಾಡುತ್ತಿರುವುದು ನಾಚಿಕೆ ಕೇಡು ಮತ್ತು ಸಾರ್ವಜನಿಕರಿಗೆ ಮಾಡುವ ವಂಚನೆ ಮತ್ತು ಮೋಸವಾಗಿರುತ್ತದೆ. ಇನ್ನಾದರೂ ಸರಕಾರ ಸಾರ್ವಜನಿಕರಿಗೆ ಈ ರೀತಿ ಮಾಡುವ ವಂಚನೆಯನ್ನು ನಿಲ್ಲಿಸಿ, ತಕ್ಷಣ 9 ಮತ್ತು 11 ಇ-ಸ್ವತ್ತು ಆದೇಶವನ್ನು ಹಿಂಪಡೆಯಬೇಕು .
ಮೋನಪ್ಪ ಭಂಡಾರಿ
