ಮೂಡುಬಿದರೆ: ಅ.9ರಂದು ಹಾಡುಹಗಲೇ ಮೂಡುಬಿದರೆ ಮುಖ್ಯರಸ್ತೆ ಪಕ್ಕ ಕೊಲೆಯಾದ ಪ್ರಶಾಂತ್ ಪೂಜಾರಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ತನಿಖೆಯ ಹಿತದೃಷ್ಠಿಯಿಂದ ಪೊಲೀಸರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.
ಶನಿವಾರ ಈ ಕುರಿತು ಮಾಹಿತಿ ಹಬ್ಬಿದ್ದು, ಪೊಲೀಸ್ ಅಧಿಕಾರಿಗಳು ಕೂಡ ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕಿಲ್ಲ. ತನಿಖೆಗೆ ಅಡ್ಡಿಯಾಗಬಾರದೆನ್ನುವ ದೃಷ್ಠಿಯಿಂದ ಈ ಮಾಹಿತಿ ನೀಡುವುದಿಲ್ಲ. ಈ ಕುರಿತು ಶೀಘ್ರ ಅಧಿಕೃತ ಮಾಹಿತಿ ನೀಡುತ್ತೇವೆ ಎನ್ನುವ ವಿಶ್ವಾಸವನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
Prashanth

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹತ್ತಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಡಿಸಿದ್ದರು. ಈ ಪೈಕಿ ಇಬ್ಬರು ಕೊಲೆಗೆ ಪೂರಕ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಈ ಘಟನೆಯನ್ನು ಖಂಡಿಸಿ, ಇದೇ ಮೊದಲ ಬಾರಿಗೆ 2 ದಿನಗಳ ಸಂಪೂರ್ಣ ಬಂದ್ ನಡೆದಿದೆ. ಪ್ರಕರಣದ ನಡೆದು 10 ದಿನವಾದರೂ ಕಾವು ಶಮನವಾಗದಿರುವುದು ಮೂಡುಬಿದರೆ ಮಾತ್ರವಲ್ಲದೇ ಕರಾವಳಿಯ ಜನರಲ್ಲಿ ಕುತೂಹಲಕ್ಕೂ ಕಾರಣವಾಗಿದೆ. ಪ್ರಶಾಂತ್ ಕುಟುಂಬಕ್ಕೆ ರಾಜ್ಯ ಮಾತ್ರವಲ್ಲದೇ ಮುಂಬೈಯ ಉದ್ಯಮಿಗಳಿಂದಲೂ ಆರ್ಥಿಕ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೇಂದ್ರ ಸಚಿವ ಶ್ರೀಪಾದ್ ನಾಯಕ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು, ಸಂತೋಷ್ ಗುರೂಜಿ, ಕರಿಂಜೆ, ಕೇಮಾರು, ವಜ್ರದೇಹಿ ಸಹಿತ ವಿವಿಧ ಕಡೆಗಳ ಸ್ವಾಮೀಜಿಗಳೂ ಪ್ರಶಾಂತ್ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿದೆ. ವಿವಿಧ ಕಡೆಗಳ ಹಿಂದೂ ಸಂಘಟನೆಗಳು, ಸಿಐಟಿಯು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರಕರಣವನ್ನು ಖಂಡಿಸಿವೆ.

ಪ್ರಶಾಂತ್ ಕೊಲೆ ಪ್ರಕರಣ ಸಂಬಂಧಪಟ್ಟ ಮಾಹಿತಿ ಹಾಗೂ ಆರೋಪಿಗಳ ವಿವರವನ್ನು ಪೊಲೀಸ್ ಅಧಿಕಾರಿಗಳು ಭಾನುವಾರ ಮಂಗಳೂರಿನಲ್ಲಿ ನೀಡುವ ಸಾಧ್ಯತೆಯಿದೆ. ಕಳೆದ ಹತ್ತು ದಿನಗಳಿಂದ ಮೂಡುಬಿದರೆಯಲ್ಲಿ ಬಂದೋಬಸ್ತ್ ಕೂಡ ಮೂಡುಬಿದರೆಯಲ್ಲಿ ಮಾಡಲಾಗಿದ್ದು, ಮುಂದುವರಿದಿದೆ.
ಅ.9ರಂದು ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಸೇರಿದಂತೆ, ಪ್ರಕರಣಕ್ಕೆ ಪೂರಕವಾಗಿ ಹತ್ತು ದಿನಗಳಲ್ಲಿ 5 ವಿವಿಧ ಘಟನೆಗಳಾಗಿದೆ. ಘಟನೆ ನಡೆದ 2 ದಿನದಲ್ಲಿ ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ್ ಕೋಟ್ಯಾನ್ ಅವರಿಗೆ ಬೆದರಿಕೆ ಕರೆ ಬಂದಿತ್ತು.

ಬಜರಂಗದಳ ಇರುವೈಲ್ ಮುಖಂಡ ಸುನೀಲ್ ಅವರಿಗೆ ಇಬ್ಬರು ಮುಸುಕುಧಾರಿಗಳು ಬೈಕಿನಲ್ಲಿ ಬಂದು ಬೆದರಿಕೆಯೊಡ್ಡಿರುವ ಕುರಿತು ಮೂಡುಬಿದರೆ ಠಾಣೆಗೆ ದೂರು ನೀಡಿದ್ದಾರೆ. ವಾರದೊಳಗೆ ಕೊಲೆಯ ಪ್ರತ್ಯಕ್ಷದರ್ಶಿ , ಪ್ರಶಾಂತ್ ಹೂವಿನಂಗಡಿ ಪಕ್ಕದಲ್ಲಿ ಗೂಡಂಗಡಿ ನಡೆಸುತ್ತಿದ್ದ ವಾಮನ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಡುವೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ ಅವರಿಗೂ ಬೆದರಿಕೆಯ ಕರೆ ಬಂದಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡುಬಿದರೆ ಹಾಗೂ ಮಂಗಳೂರಿನ ಕೆಲವು ಪ್ರಮುಖರು ಸುಪಾರಿ ನೀಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಶನಿವಾರ ವದಂತಿ ಹಬ್ಬಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಈ ಕುರಿತು ನಿರಂತರವಾಗಿ ಮೆಸೇಜುಗಳು ಹರಿದಾಡುತ್ತಿವೆ. ಮೂಡುಬಿದರೆಯ ಕೆಲವು ಉದ್ಯಮಿಗಳು ಹಂತಕರಿಗೆ ಆರ್ಥಿಕ ನೆರವು ನೀಡಿದ್ದಾರೆ ಎನ್ನುವ ವದಂತಿಯೂ ಹರಿದಾಡುತ್ತಿದ್ದು, ಪೊಲೀಸರ ಸೂಕ್ತ ತನಿಖೆಯ ಬಳಿಕವೇ ಸತ್ಯಾಸತ್ಯತೆ ಹೊರಬೀಳಲಿದೆ.

By Suddi9

Leave a Reply

Your email address will not be published. Required fields are marked *