ಮೂಡುಬಿದಿರೆ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಬಿಜೆಪಿ, ಸಂಘಪರಿವಾರ ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಸಂಗ್ರಹಿಸಿದ 10ಲಕ್ಷ ರೂ ಮೊತ್ತದ ಚೆಕ್ಕನ್ನು ಗುರುವಾರ ಪದ್ಮಾವತಿ ಕಲಾ ಮಂದಿರದಲ್ಲಿ ನಡೆದ ಪ್ರಶಾಂತ್ ಪೂಜಾರಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪೋಷಕರಿಗೆ ಹಸ್ತಾಂತರಿಸಲಾಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಆರ್‍ಎಸ್‍ಎಸ್ ಮಧ್ಯಕ್ಷೇತ್ರೀಯ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಕರಾವಳಿ ಜಿಲ್ಲೆಯ ಸಮನ್ವಯದಿಂದ ಬಾಳುವ ಜಿಲ್ಲೆಯಾಗಿತ್ತು. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಿ ಹಿಂದೂಗಳನ್ನು ಅವರ ವಿರುದ್ಧ ಎತ್ತಿಕಟ್ಟುವ ತುಚ್ಛ ರಾಜಕಾರಣಕ್ಕೆ ಇಳಿದ ಪರಿಣಾಮವಾಗಿ ಜಿಲ್ಲೆ ಈಗ ಅಗ್ನಿಕುಂಡದ ಮೇಲೆ ನಿಂತಂತಿದೆ. ಜಿಲ್ಲೆಗೆ ಮೂರು ಮಂತ್ರಿಗಳನ್ನು ಪಡೆದ ಹೆಮ್ಮೆಯಿದ್ದರೂ ಅವರು ಹಿಂದೂಗಳನ್ನು ನಿರಂತರ ದಮನಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಗೋಕಳ್ಳ, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯು ಪೊಲೀಸರಿಂದಲೇ ಹತ್ಯೆಯಾದಾಗ 10ಲಕ್ಷ ಪರಿಹಾರ ಒದಗಿಸಿಕೊಟ್ಟ ಮಂತ್ರಿಗಳು ಪ್ರಶಾಂತ್‍ನ ಕುಟುಂಬವನ್ನು ಕಣ್ಣೆತ್ತಿಯೂ ನೋಡಿಲ್ಲ. ಈ ಕೃತ್ಯದಲ್ಲಿ ಇಲ್ಲಿನ ಮಂತ್ರಿಗಳೂ ಶಾಮೀಲಾಗಿರುವ ಶಂಕೆಯಿದೆ. ಈ ದೇಶ ಹಿಂದೂಗಳಿಂದ ಕೈತಪ್ಪಿ ಹೋದರೆ ಇಲ್ಲಿನ ದೇವಾಲಯಗಳು, ಹಿಂದೂಗಳ ಶ್ರದ್ಧಾಕೇಂದ್ರಗಳು, ಸಂಸ್ಕ್ರತಿಗಳು ಉಳಿಯುವುದಿಲ್ಲ. ಗೋವು ಹಾಗೂ ನಮ್ಮ ಮನೆಯ ಸ್ತ್ರೀಯರನ್ನು ರಕ್ಷಿಸಲು ಪ್ರತಿಯೊಬ್ಬರೂ ಹಿಂದುತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಮೃತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು ಎಂದರು. ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮೃತರ ಕುಟುಂಬಕ್ಕೆ ಸಂಘಪರಿವಾರ ಹಾಗೂ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿದ ದೇಣಿಗೆಯ ವಿವರ ನೀಡಿದರು. ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶೀ ಗೋಪಾಲ್‍ಜಿ, ಸಂಸದ ನಳಿನ್ ಕುಮಾರ್ ಕಟೀಲು, ಭಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್, ವಿಹಿಂಪ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಮುಖಂಡರಾದ ಭುಜಂಗ ಕುಲಾಲ್, ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಕೆ.ಪಿ.ಸುಚರಿತ ಶೆಟ್ಟಿ, ಪ್ರಶಾಂತ್ ತಂದೆ ಆನಂದ ಪೂಜಾರಿ ಉಪಸ್ಥಿತರಿದ್ದರು. ವಿಹಿಂಪ ಪ್ರಖಂಡ ಅಧ್ಯಕ್ಷ ಶ್ಯಾಮ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
