ಮೂಡುಬಿದರೆ: ಛಾಯಾಗ್ರಾಹಕ ಹರೀಶ್ ಆಚಾರ್ಯ ಬುಧವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಮೂಡುಬಿದರೆಯ ಎಲ್ಲಾ ಛಾಯಾಚಿತ್ರಗ್ರಾಹಕರು ಗುರುವಾರ ತಮ್ಮ ಸ್ಟುಡಿಯೋಗಳನ್ನು ಮುಚ್ಚುವ ಮೂಲಕ ಹರಾತಾಳ ನಡೆಸಿದರು. ಮೃತರ ಊರಾದ ಶಿರ್ತಾಡಿಯಲ್ಲಿ ಭಾಗಶಃ ಅಂಗಡಿಗಳು ಮುಚ್ಚಿದ್ದವು.
ಗುರುವಾರ ಮಧ್ಯಾಹ್ನ ಮೂಡುಬಿದರೆ ಫೊಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮೃತದೇಹವನ್ನು ವಿದ್ಯಾಗಿರಿಯಿಂದ ಶಿರ್ತಾಡಿಯಲ್ಲಿರುವ ಅವರ ಮನೆಯವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಜಾತಿ ಮತ ಭೇದವಿಲ್ಲದೆ ವಿವಿಧ ಧರ್ಮಗುರುಗಳು, ರಾಜಕೀಯ, ಸಾಮಾಜಿಕ ಮುಖಂಡರು ಹಾಗೂ ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯ ಛಾಯಾಚಿತ್ರ ಗ್ರಾಹಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
