ಜವಾಬ್ದಾರಿಯುತ ಜನಪ್ರತಿನಿಧಿಗಳಿಂದಲೇ ಪ್ರತಿಭಟನೆ, ಬ್ಯಾನರ್ ರಾಜಕೀಯ: ಸಚಿವ ರೈ ಲೇವಡಿ
ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ರೂ 1ಕೋಟಿ ವೆಚ್ಚದಲ್ಲಿ ಕುರಿಯಾಳ -ಪಾಲೆದಗುರಿ (6.5ಕಿ.ಮೀ.) ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಪ್ರಥಮ ಹಂತದಲ್ಲಿ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮುಂದುವರಿಕಾ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಸೋರ್ಣಾಡು ಎಂಬಲ್ಲಿ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಹದಗೆಟ್ಟ ಕುರಿಯಾಳ-ಪಾಲೆದಗುರಿ ಜಿಲ್ಲಾ ಪಂಚಾಯಿತಿ ರಸ್ತೆಗೆ ರೂ 1ಕೋಟಿ ವೆಚ್ಚದಲ್ಲಿ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಇಲ್ಲಿನ ಕೆಂಪುಗುಡ್ಡೆ-ಬಂಟ್ವಾಳ ಸಂಪರ್ಕ ರಸ್ತೆ ಸಂಪೂರ್ಣ ಡಾಂಬರೀಕರಣಗೊಳಿಸಲಾಗಿದ್ದು, ಈ ಜಿಲ್ಲಾ ಪಂಚಾಯಿತಿ ರಸ್ತೆ ಅಭಿವೃದ್ದಿ ಕೇವಲ ಸಚಿವರಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಿಂದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಂಸದರಿಗೂ ಜವಾಬ್ದಾರಿ ಇದೆ. ಇಂತಹ ಜವಾಬ್ದಾರಿಯುತ ವ್ಯಕ್ತಿಗಳೇ ಪ್ರತಿಭಟನೆ ಮತ್ತು ಬ್ಯಾನರ್ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ರೂ 36 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಂಗಬೆಟ್ಟು ಗ್ರಾಮದಿಂದ ಅಮ್ಟಾಡಿ ಗ್ರಾಮತನಕ ಪ್ರತೀ ಮನೆಗೆ ಕುಡಿಯುವ ನೀರು ಪೂರೈಸುವ ಮಹತ್ತರ ಯೋಜನೆ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡು ಪ್ರಗತಿ ಹಂತದಲ್ಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಘನಾಥ ಪಯ್ಯಡೆ, ಹಾಲಿ ಸದಸ್ಯ ಎಪ್ರಿಯಂ ಸಿಕ್ವೇರಾ, ಜಿಲ್ಲಾ ಕೆಡಿಪಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ ಶೆಟ್ಟಿ, ಗಣೇಶ ಶೆಟ್ಟಿ, ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕಾಂಗ್ರೆಸ್ ಮುಖಂಡ ಬಿ.ಎಚ್. ಖಾದರ್, ಸೋರ್ಣಾಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ ರಮೇಶ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
