ಸುದ್ದಿ9 ಮಂಗಳೂರು: ಶೃಂಗೇರಿಯಲ್ಲಿ ಕಾನೂನನ್ನು ಧಿಕ್ಕರಿಸಿ ಅಕ್ರಮವಾಗಿ ಗೋವುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದವರ ಮೇಲೆ ನಕ್ಸಲರೆಂಬ ತಪ್ಪು ಕಲ್ಪನೆಯಿಂದ ಶೂಟೌಟ್ ನಡೆದ ಘಟನೆಯನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ಬಿಜೆಪಿ ಜಿಲ್ಲಾ ಸಮಿತಿ ಸ್ವಾಗತಿಸಿದೆ. ಅದಾಗ್ಯೂ, ಗೋಸಾಗಾಟದ ಅಪರಾಧಿಗಳನ್ನು ಕೋಮು ಆಧರಿಸಿ ಬೆಂಬಲಿಸುವ ಪ್ರವೃತ್ತಿಗೆ ತೀವ್ರ ಆಕ್ರೋಶವನ್ನು ಬಿಜೆಪಿ ಜಿಲ್ಲಾ ಸಮಿತಿ ವ್ಯಕ್ತಪಡಿಸಿದೆ.
ಗೋವುಗಳನ್ನು ರಾತ್ರಿಯ ಸಮಯದಲ್ಲಿ ಕಳ್ಳಸಾಗಾಟದಲ್ಲಿ ತೊಡಗಿದ್ದ ತಂಡದ ಅನುಮಾನಸ್ಪದ ವರ್ತನೆಯಿಂದ ಎಎನ್ಎಫ್ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ಮಾರಕಾಸ್ತ್ರಗಳನ್ನು ತೋರಿಸಿ ಓಟಕ್ಕಿತ್ತ ತಂಡವನ್ನು ನಕ್ಸಲರೆಂಬ ಶಂಕೆಯಿಂದ ಶೂಟ್ ಮಾಡಿದ್ದು ಮತ್ತು ಈ ಬಗ್ಗೆ ಸಿಒಡಿ ತನಿಖೆಗೆ ಆದೇಶಿಸಿದ್ದು ಅನುಮಾನ ಪರಿಹಾರದ ದೃಷ್ಟಿಯಿಂದ ಸರಿಯಾದುದೇ, ಆದರೂ ಘಟನೆಯನ್ನು ವೈಭವೀಕರಿಸಿ ಕೋಮುಬಣ್ಣ ನೀಡಿ ಪ್ರತಿಭಟನೆಗಳು ಮತ್ತು ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಧರ್ಮಗಳ ನಡುವೆ ವೈಮನಸ್ಸನ್ನು ಸೃಷ್ಟಿಸಿ ಕಂದಕಗಳನ್ನು ಉಂಟುಮಾಡುವಂತಹ ಇಂತಹ ಕೃತ್ಯಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅಪರಾಧಗಳನ್ನು ಅಪರಾಧಿಗಳ ಕೃತ್ಯದಿಂದ ನಿರ್ಧರಿಸಬೇಕೇ ಹೊರತು ಧರ್ಮದಿಂದಲ್ಲ. ಇಂತಹ ಘಟನೆಗಳ ರಾಜಕೀಕರಣವನ್ನು ಬಿಜೆಪಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ಹೇಳಿಕೆಯಲ್ಲಿ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *