ಬಂಟ್ವಾಳ:ಒಡಿಯೂರು-ಗುರುದೇವ ಜ್ಞಾನ ಮಂದಿರ; ಜೀವಹತ್ಯೆಯ ಪ್ರಕರಣಗಳು ಹಾಗೂ ಜೀವಸೆಲೆಯನ್ನು ನಾಶಪಡಿಸುವ ಅಪಾಯಕಾರಿ ಯೋಜನೆಗಳು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದ್ದು, ಜೀವ ಮತ್ತು ಜೀವಸೆಲೆಗೆ ಅಪಾಯ ಒದಗದಿರಲಿ ಎಂದು ಬಂಟ್ವಾಳ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ , ಮಂಗಳೂರು ವಿ.ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ, ಕನ್ನಡ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ ಆಶಯ ವ್ಯಕ್ತಪಡಿಸಿದ್ದಾರೆ.VIL_19 SEP_8

 

VIL_19 SEP_10

 

VIL_19 SEP_9

ಕನ್ನಡ ಸಾಹಿತ್ಯ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಡಿಯೂರು ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆದ ಬಂಟ್ವಾಳ ತಾಲೂಕು 16 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಬಗ್ಗೆ ತಮ್ಮ ಮಾತಿನಲ್ಲಿ ಖಂಡನೆ ವ್ಯಕ್ತಪಡಿಸಿದ ಅವರು, ಅಲ್ಲಲ್ಲಿ ವ್ಯಕ್ತಿಗಳ ಕೊಲೆಯಾಗುತ್ತಿರುವುದು ಪ್ರಜಾಪ್ರಭುತ್ವದ ತತ್ವ ಮತ್ತು ವ್ಯವಸ್ಥೆಗೆ ಕಳಂಕತರುವಂತಾದ್ದು ಎಂದರು. ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆಯೂ ತನ್ನ ಅಸಮಾಧಾನ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷ ಡಾ.ಚಿನ್ನಪ್ಪ ಗೌಡರು, ಇದೊಂದು ಬಗೆಯ ನಾಟಕದಂತೆ ಭಾಸವಾಗುತ್ತಿದೆ, ಈ ಯೋಜನೆಯ ಹಿಂದಿರುವ ರಹಸ್ಯ ಕಾರ್ಯಸೂಚಿಯ ಬಗ್ಗೆ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ, ಸಂಘರ್ಷದ ಹಂತಕ್ಕೆ ಬಂದಿರುವ ಈ ಎತ್ತಿನ ಹೊಳೆ ಯೋಜನೆಯ ಕುರಿತಾಗಿ ಪರಿಸರಾಸಕ್ತ ಸಂಘಟನೆಗಳು ಎತ್ತಿರುವ ಹತ್ತು ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರ ಕೊಡಬೇಕೆಂದು ಅವರು ಒತ್ತಾಯಿಸಿದರು.
ಊರಿಗೆ  ಕಾರ್ಖಾ ನೆ ಬಂದಾಗ, ಅಣೆಕಟ್ಟು ಕಟ್ಟಿದಾಗ, ಬಸ್ ನಿಲ್ದಾಣ, ರಸ್ತೆಗಳ ನಿರ್ಮಾಣವಾದಾಗೆಲ್ಲಾ ನೆಲ ಕೊಟ್ಟವರು, ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು, ಅಭಿವೃದ್ದಿಯ ಹೆಸರಿನಲ್ಲಾದ ನಷ್ಟಗಳ ದೊಡ್ಡ ಇತಿಹಾಸವೇ ನಮ್ಮ ಮುಂದಿರುವುದರಿಂದ ಜನರು ಎಚ್ಚೆತ್ತು ಪ್ರಶ್ನೆಗಳನ್ನು ಕೇಳುವುದು ಪ್ರಜಾಪ್ರಭುತ್ವದ ಸರಿಯಾದ ಹೆಜ್ಜೆ ಎಂದರು. ತಿಳುವಳಿಕೆ ಇಲ್ಲದ ಮಂದಿ ಯೋಜನೆಯನ್ನು ವಿರೋಧಿಸುತ್ತಾರೆ ಎಂದಾಗಿದ್ದರೆ, ಜನರಿಗೆ ಸರಿಯಾದ ತಿಳುವಳಿಕೆ ನೀಡಬೇಕಿದೆ, ನೀರಿದ್ದರೆ ಬಾಯಾರಿದವರಿಗೆ ನೀರುಕೊಡಲಾರದಷ್ಟು ಕೃಪಣರು ಕನ್ನಡಿಗರಲ್ಲ, ತುಳುವರಲ್ಲ ಎಂದು ಖಾರವಾಗಿಯೇ ನುಡಿದ ಅವರು, ಎತ್ತಿನಹೊಳೆ ಯೋಜನೆ ಸರಳವಾದುದಲ್ಲ, ನಾನಾ ಆಯಾಮಗಳಿಂದ ಇದರ ಬಗ್ಗೆ ಚಿಂತನೆ ನಡೆಸಬೇಕೆಂದರು. ಜನರು ಬದುಕಬೇಕೆಂದು ಕಾವ್ಯ ಬರೆದನೆಂದು ರಾಘವಾಂಕ ಹೇಳಿದಂತೆ ನಮ್ಮ ಯೋಜನೆಗಳು ಜನರನ್ನು ಬದುಕಿಸಬೇಕು ಎಂದರು.

ಕಲ್ಪಿತ ಶತ್ರು ಅಪಾಯಕಾರಿ..
ಕಣ್ಣಿಗೆ ಕಾಣುವ ಶತ್ರುಗಳಿಗಿಂತ ಕಲ್ಪಿತ ಶತ್ರುಗಳು ಹೆಚ್ಚು ಅಪಾಯಕಾರಿ ಎಂದು ಡಾ.ಚಿನ್ನಪ್ಪ ಗೌಡ ರು ಅಭಿಪ್ರಾಯಿಸಿದ್ದಾರೆ. ಯಾವುದೇ ಮಾಧ್ಯಮ, ಭಾಷೆ, ಧರ್ಮ, ಕಂಪ್ಯೂಟರ್, ಟಿ.ವಿ ಯನ್ನು ಶತ್ರುವೆಂದು ನೋಡದೆ ಅವುಗಳ ಮಿತಿ ಮತ್ತು ಸಾಮಥ್ರ್ಯವನ್ನು ಅರಿತು, ವಿವೇಕ ಮತ್ತು ವಿವೇಚನೆಯಿಂದ ಬಳಸಿಕೊಳ್ಳಬೇಕು ಎಂದರು. ಸಾಹಿತ್ಯ, ನಾಟಕ, ಸಿನಿಮಾ,ಸಂಗೀತ,ಯಕ್ಷಗಾನ ಮೊದಲಾದ ಸಾಹಿತ್ಯ ಕಲಾಪ್ರಕಾರಗಳನ್ನು ಪರಸ್ಪರ ಎದುರುಬದುರಾಗಿಸಿ ಇವುಗಳನ್ನು ವಿರೋಧಿನೆಲೆಯಲ್ಲಿ ನಿಲ್ಲಿಸಿ ನೋಡುವ ಪ್ರವೃತ್ತಿ ಸರಿಯಲ್ಲ ಎಂದ ಅವರು, ಕನ್ನಡ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಹುಟ್ಟು ಹಾಕಲಾಗಿರುವ ಕಲ್ಪಿತ ಶತ್ರುಗಳ ಬಗ್ಗೆ ಎಚ್ಚರವಹಿಸಿ ಹೆಜ್ಜೆ ಇಡಬೇಕೆಂದರು.
ಶಿಕ್ಷಣ ಪ್ರಯೋಗ ಹೇರಿಕೆಯಾಗದೆ ವಿಕಸನವಾಗಲಿ…
ಜಾಗತಿಕ ಮಟ್ಟದಲ್ಲಿ ಜಾಗಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವುದು ಇಂದಿನ ಶಿಕ್ಷಣದ ಪ್ರಯೋಗಗಳ ಉದ್ದೇಶವಾಗಿದ್ದು, ಇದರಲ್ಲಿನ ಗೊಂದಲಗಳು ಬಗೆಹರಿಯಬೇಕಿದೆ ಎಂದು ಸಲಹೆ ನೀಡಿದ ಅವರು, ಶಿಕ್ಷಣದ ಕ್ರಮವಾಗಲೀ, ವ್ಯವಸ್ಥೆಯಾಗಲೀ ಅನಾಮತ್ತಾದ ಹೇರಿಕೆಯಾಗದೆ ಸಹಜವಾದ ವಿಕಸನವಾಗಬೇಕು, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಸೂಕ್ಷ್ಮ, ಸಂವೇದನಾ ಶೀಲ ಹಾಗೂ ಸೃಜನ ಶೀಲ ಮನೋಧರ್ಮದಿಂದ ಕೆಲಸಮಾಡಬೇಕಾಗಿದೆ ಎಂದರು.
ರೈತರ ಆತ್ಮಹತ್ಯೆ ಬಗ್ಗೆ ಆತಂಕ..
ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಕುರಿತಾಗಿಯೂ ತಮ್ಮ ಆತಂಕ ವ್ಯಕ್ತಪಡಿಸಿದ ಡಾ.ಚಿನ್ನಪ್ಪ ಗೌಡರು, ವಾಣಿಜ್ಯ ಜಗತ್ತು ಮತ್ತು ಉದ್ಯಮಿಗಳು ವಿಜೃಂಭಿಸಲು ಅವಕಾಶ ಕೊಟ್ಟಿರುವುದರಿಂದ ಅನ್ನ ಕೊಡುವ ಅನ್ನದಾತ ಬದುಕಿನ ನೆಲೆಯನ್ನೇ ಕಳೆದುಕೊಳ್ಳುತ್ತಿದ್ದಾನೆ ಎಂದು ಗಂಭೀರ ಆರೋಪಮಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆ ಸೂಕ್ತಕ್ರಮಕೈಗೊಳ್ಳುವಂತೆ ಆಗ್ರಹಿಸಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಇವುಗಳ ಭದ್ರತೆ ಮತ್ತು ಸಮಾನ ರೀತಿಯ ಲಭ್ಯತೆ ಸರ್ಕಾ ರದ ಆದ್ಯಕರ್ತವ್ಯವಾಗಬೇಕು, ರೈತಪರ ಧೋರಣೆಗಳನ್ನು ಸ್ಪಷ್ಟವಾಗಿ ರೂಪಿಸಬೇಕೆಂದರು.

ಇತಿಹಾಸ ಕಟ್ಟುವ ಕಾರ್ಯ ನಿರಂತರ..
ಇತಿಹಾಸ ರಚನೆಯು ಒಂದು ನಿರಂತರ ಕ್ರಿಯೆ, ಇತಿಹಾಸವನ್ನು ಕಟ್ಟುವ ಮತ್ತು ಮರು ಕಟ್ಟುವ ಕಾರ್ಯ ಕ್ಕೆ ಅಂತ್ಯ ಎಂಬುದಿಲ್ಲ. ಅಲ್ಲಿರುವುದು ಒಂದು ಸತ್ಯವಲ್ಲ, ಹಲವು ಸತ್ಯ. ಇಲ್ಲಿ ವೈಭವೀಕರಣಕ್ಕೆ ಅವಕಾಶವಿಲ್ಲ, ನಾನು ಹೇಳಿದ್ದೇ ಸತ್ಯ ಎಂಬ ಮಾತಿಲ್ಲ, ಸತ್ಯವು ಸಾಪೇಕ್ಷ ಮತ್ತು ಸ್ವೀಕಾರಕ್ಕೋ ನಿರಾಕರಣೆಗೋ ಒಳಗಾಗುವಂತಾದ್ದು, ಇತಿಹಾಸದ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕೆಂದ ಅವರು, ಇತಿಹಾಸ ಕುರಿತ ತಪ್ಪುಗ್ರಹಿಕೆಗಳನ್ನು ಸರಿಪಡಿಸಬೇಕೆಂದರು.

ಉದ್ಘಾಟನೆ;
ಇಂಗ್ಲೀಷ್ ನಿಂದ ಅಪಾಯವಿಲ್ಲ, ಆ ಭಾಷೆಯ ಸಂಸ್ಕೃತಿಯಿಂದ ಅಪಾಯವಿದೆ ಎಂಬ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಅವರು, ಕನ್ನಡ ಶಾಲೆಗಳು ಮುಚ್ಚುವ ಭೀತಿಯಲ್ಲಿದ್ದು, ಉಂಟಾಗಿರುವ ಭಾಷಾಮಾಧ್ಯಮಗಳ ಗೊಂದಲಗಳ ಬಗ್ಗೆ ಪುನರಾವಲೋಕನ ಆಗಬೇಕಿದೆ ಎಂದರು. ಭಾಷೆ ಸಂಸ್ಕೃತಿಯ ದ್ಯೋತಕವಾಗಿದ್ದು, ಇಂಗ್ಲೀಷ್ ಭಾಷೆಯ ಪ್ರಭಾವದಿಂದ ಕಂಗ್ಲೀಷ್, ತುಂಗ್ಲೀಷ್, ಮಂಗ್ಲೀಷ್ ಆಗಿದೆ ಎಂದ ಅವರು, ನಮ್ಮ ಹೆತ್ತಬ್ಬೆ ತುಳು ಅಪ್ಪೆ, ಕನ್ನಡಮ್ಮ ಅಜ್ಜಿ, ರಾಷ್ಟ್ರಭಾಷೆ ಹಿಂದಿ ಮುತ್ತಜ್ಜಿ ಎಂದು ವಿಮರ್ಶಿಸಿದರು.
ಸಾಹಿತ್ಯ ಸಾರ್ವಕಾಲಿಕವಾಗಿರಬೇಕು ಮತ್ತು ಅದು ಋಣಾತ್ಮಕವಾಗಿರದೆ, ಗುಣಾತ್ಮಕವಾಗಿರಬೇಕು ಎಂದ ಅವರು, ಹಿತವಾದ ಸಾಹಿತ್ಯವನ್ನು ಕೊಡುವ ಸಾಹಿತಿ ಒಡೆಯುವುದಕ್ಕಿಂತ ಮುಖ್ಯವಾಗಿ ಕಟ್ಟುವ ಕಾಯಕವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಾನೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಚಿನ್ನಪ್ಪ ಗೌಡರ ಬಗ್ಗೆ ಉಲ್ಲೇಖಿಸಿದ ಅವರು, ಚಿನ್ನಪ್ಪ ಗೌಡರು, ಕೇವಲ ಚಿನ್ನ ಅಲ್ಲ, ಅಪ್ಪಟ ಚಿನ್ನ. ತಮ್ಮ ಅಧ್ಯಯನಗಳಿಂದ ಅವರು ಇದನ್ನು ಸಾದರ ಪಡಿಸಿದ್ದಾರೆ ಎಂದರು. ಒತ್ತುವ ಸಂಸ್ಕೃತಿ ಹೋಗಿ ಟಚ್ ಸಂಸ್ಕೃತಿ ಬಂದಿದೆ. ಟಚ್ ನಲ್ಲಿ ವಿಶ್ವವನ್ನು ಮುಟ್ಟುವ ಪ್ರಯತ್ನ ಮಾಡಿದ್ದೇವೆ, ವಿಶ್ವನಾಥ ನನ್ನು ಮುಟ್ಟುವ ಪ್ರಯತ್ನ ಆಗಬೇಕಿದೆ, ಸಾಹಿತ್ಯ ನಮ್ಮಲ್ಲಿ ಆ ಬಗೆಯ ಸಂಸ್ಕಾರ ಬೆಳೆಸಲು ಸಹಾಯಕವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಗೆ ತನ್ನದೇ ಆದ ಪ್ರತ್ಯೇಕತೆ ಇದ್ದು, ವಿವಿಧ ಭಾಷಿಕರಿಂದಾಗಿ ಜಿಲ್ಲೆ ಸಮೃದ್ದವಾಗಿದೆ. ಜೊತೆಗೆ ಕನ್ನಡದ ಕೆಲಸಗಳಿಗಾಗಿ ಎಲ್ಲಾ ಜಾತಿ-ಮತ ಮೀರಿದ ಒಗ್ಗಟ್ಟು, ಸಂಕಲ್ಪ ದಕ್ಷಿಣ ಕನ್ನಡದ ಜಿಲ್ಲೆಯ ಜನತೆ ಮಾಡಿಕೊಂಡಿದ್ದಾರೆ. ದ.ಕ.ಜಿಲ್ಲೆ ಹಬ್ಬದ ಜಿಲ್ಲೆ ಎಂದು ಹೇಳಿದ ಸಚಿವರು, ಪ್ರತಿನಿತ್ಯ ಮನೆಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳೆ ಇದಕ್ಕೆ ಸಾಕ್ಷಿ ಎಂದರು.
ಕನ್ನಡ ಶಾಲೆಗಳ ಮುಚ್ಚುವಿಕೆಯ ವಿರೋಧ ದಿಂದಾಗಿ ಕೆಲ ಶಿಕ್ಷಕರಿಗೆ ಅನುಕೂಲಕರವಾಗಿ ಪರಿಣಮಿಸಿದೆ, ಅಧ್ಯಾಪಕರಿಗಾಗಿ ಶಾಲೆ ಎಂಬ ಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಮರು ಚಿಂತನೆ ಅನಿವಾರ್ಯ ಎಂದರು. ಗ್ರಾಮೀಣ ಅಭಿವೃದ್ದಿಯ ಚಿಂತನೆಯ ಜೊತೆಗೆ ಸಂಸ್ಥಾನದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಡಿನಾಡಿನಲ್ಲಿ ಕನ್ನಡದ ಕೆಲಸ ಪರಿಪೂರ್ಣವಾಗಿ ನಡೆಯಬೇಕೆನ್ನುವ ಇರಾದೆಯಿಂದ ಕೆಲಸಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಮೇಶ್ ನಾಯಕ್ ರಾಯಿ, ಶಂಕರ ಸಾರಡ್ಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದೇವಪ್ಪ ನಾಯ್ಕ ಕನ್ಯಾನ, ಸಂತೋಷ್ ಬಿ.ಎನ್ ಹಾಗೂ ಶಾರದಾ ಬಿ. ಹೂ ಹಾಕುವ ಕಲ್ಲು ರವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಚಿಂತನ ಬಯಲು ಪುಸ್ತಕ ಬಿಡುಗಡೆಗೊಳಿಸಿದರು. ಶ್ರೀ ಮಾತಾನಂದಮಯಿ, ಬಾಳೆಕೋಡಿ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ, ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಮೂಡಂಬೈಲು, ಜಿಲ್ಲಾಪಂಚಾಯತ್ ಸದಸ್ಯರಾದ ಶೈಲಜಾ ಭಟ್, ಮಮತಾ ಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಕರೋಪಾಡಿ ಗ್ರಾ.ಪಂ.ಅಧ್ಯಕ್ಷೆ ಬೇಬಿ ಆರ್ ಶೆಟ್ಟಿ, ತಾ.ಪಂ.ಸದಸ್ಯೆ ಕಮಲ, ಜಿಲ್ಲಾ ಕಸಾಪ ದ ಗೌರವ ಕಾರ್ಯದಶರ್ಿ ಐತಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ  ತಾರಾನಾಥ ಕೊಟ್ಟಾರಿ ವಂದಿಸಿದರು. ಮಂಜುವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ನಿರ್ವಹಿಸಿದರು.
.ತೀರಾ ಹದಗೆಟ್ಟಿರುವ ಕನ್ಯಾನ ಗ್ರಾ.ಪಂ. ವ್ಯಾಪ್ತಿಯ ಜಿಲ್ಲಾ ಪಂಚಾಯತ್ ರಸ್ತೆಯನ್ನು ಪಿಡಬ್ಲೂ ಡಿ ಗೆ ಸೇರ್ಪಡೆ ಗೊಳಿಸಿ, ಶೀಘ್ರದಲ್ಲಿ 1.50 ಕೋಟಿ ರೂ ಅನುದಾನದಲ್ಲಿ ಅಭಿವೃದ್ದಿ ಗೊಳಿಸಲಾಗುವುದು. ಅನುದಾನ ಮಂಜೂರಾಗಿದ್ದು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ
-ಬಿ.ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವರು.
.
ತನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ವಿಷಾದ ಪಟ್ಟಿದ್ದ, ಸಂಶೋಧಕ ತಪ್ಪು ಮಾಡಬಹುದು, ಸುಳ್ಳು ಹೇಳಲಾರ ಎಂದು ನಂಬಿದ್ದ ಕಲಬುರ್ಗಿ  ಅವರನ್ನು ಕೊಂದದಕ್ಕೆ ಕಾರಣಗಳೇನೇ ಇದ್ದರೂ, ಈ ಕೃತ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ
-ಡಾ.ಚಿನ್ನಪ್ಪ ಗೌಡ
ನಿರ್ದೇಶಕರು
ಯಕ್ಷಗಾನ ಅಧ್ಯಯನ ಕೇಂದ್ರ
ಮಂಗಳೂರು ವಿಶ್ವವಿದ್ಯಾನಿಲಯ
..

ದೇಹಕ್ಕೆ ನಾಡಿ ಎಷ್ಟು ಮುಖ್ಯವೋ ಅದರಂತೆ ಸಮಾಜಕ್ಕೆ ಸಾಹಿತ್ಯ ಅವಶ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯಕ್ತಿತ್ವಕ್ಕೆ ಸಂಸ್ಕಾರ ನೀಡುವಂತಿರಬೇಕು ಎಂದು ಶ್ರೀ ಮಾತಾನಂದಮಯಿ ಹೇಳಿದರು. ಒಡಿಯೂರಿನಲ್ಲಿ ಶನಿವಾರ ಆರಂಭಗೊಂಡ ಬಂಟ್ವಾಳ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಿನ್ನಪ್ಪ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ. ತುಳು ಅಕಾಡೆಮಿ ಸದಸ್ಯ ಡಿಎಂ.ಕುಲಾಲ್, ಜಿಲ್ಲಾ ಕ.ಸಾ.ಪದ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಎ.ಸಿ.ಭಂಡಾರಿ, ತಾಲೂಕು ಕ.ಸಾ.ಪ.ಅಧ್ಯಕ್ಷ ಜಯಾನಂದ ಪೆರಾಜೆ, ನಿಕಟಪೂರ್ವ ಅಧ್ಯಕ್ಷ ಬಿ.ತಮ್ಮಯ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮೊದಲಾದವರು
ಉಪಸ್ಥಿತರಿದ್ದರು. ಸುಬ್ರಹಣ್ಯ ಒಡಿಯೂರು ಸ್ವಾಗತಿಸಿದರು, ಸಿ.ಹೆಚ್.ಸುಬ್ರಹ್ಮಣ್ಯಭಟ್ ವಂದಿಸಿದರು. ರಮೇಶ್ ಬಿ.ಕೆ.ಕಾರ್ಯಕ್ರಮ ನಿರ್ವಹಿಸಿದರು.

.ಮೌನೇಶ ವಿಶ್ವಕರ್ಮ

By suddi9

Leave a Reply

Your email address will not be published. Required fields are marked *