ಎತ್ತಿನ ಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಯೋಜನೆಯನ್ನು ಕರ್ನಾಟಕ ಸರಕಾರ ಕೈಗೆತ್ತಿದೆ. ಪ್ರಾಕೃತಿಕವಾಗಿ ಎತ್ತಿನ ಹೊಳೆಯಲ್ಲಿರುವ ಹಲವು ಹೊಳೆಗಳು ನೇತ್ರಾವತಿ ನದಿ ಸೇರಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಆದರೆ ಪ್ರಕೃತಿಯ ವಿರುದ್ಧವಾಗಿ ಮಾನವನ ಹಸ್ತಕ್ಷೇಪದಿಂದ ನೀರಿನ ಪಥವನ್ನೇ ತಿರುಗಿಸುವುದರಿಂದ ಏನೆಲ್ಲಾ ಹಾನಿ ಉಂಟಾಗುತ್ತದೆ ಎಂಬ ಸ್ಪಷ್ಟ ಪರಿಕಲ್ಪನೆ ನಮ್ಮಲ್ಲಿ ಇಲ್ಲ. ಆದ್ದರಿಂದಲೇ ಎತಿನ ಹೊಳೆ ತಿರುವು ಯೋಜನೆಯ ಗಂಭೀರತೆಯ ಅರಿವಾಗಿಲ್ಲ. ಮಾನವನ ಹಸ್ತಕ್ಷೇಪದಿಂದ ಸಾವಿರಾರು ವರ್ಷಗಳ ಕಾಲ ನೀರು ಹರಿಸುತ್ತಿದ್ದ ಬಾವಿಯೊಂದು ಯಾವ ರೀತಿ ಮಾಯವಾಗಿದೆ ಎನ್ನುವುದಕ್ಕೆ ಸಣ್ಣ ಉದಾಹರಣೆ ಇಲ್ಲದೆ.


ಮಳಲಿಯ ಮನೆಯೊಂದರಲ್ಲಿ ಹಲವಾರು ವರ್ಷಗಳಿಂದ ಎಂದೂ ಖಾಲಿಯಾಗದ ಬಾವಿಯೊಂದಿತ್ತು. ಆದರೆ ಕಳೆದ ವರ್ಷ ಬೇಸಿಗೆ ಕಾಲದಲ್ಲಿ ಬಾವಿಯನ್ನು ಅಗಲ ಮಾಡಬೇಕೆಂದು ಮನೆಯವರು ಬಾವಿಯನ್ನು ಕೊರೆದರು. ಅದೇ ವರ್ಷದಿಂದ ನಳನಳಿಸಿ ನೀರುಕೊಡುತ್ತಿದ್ದ ಬಾವಿಯಲ್ಲಿ ನೀರು ಮಾಯವಾಗಿ ಬಿಡ್ತು. ಈ ಬಾವಿಯಲ್ಲಿ ಸೃಷ್ಟಿಯಾಗುತ್ತಿದ್ದ ನೀರು ಕೂಡಾ ಎತ್ತಿನ ಹೊಳೆಯಲ್ಲಿ ಉಂಟಾಗುವ ಮಾದರಿಯಲ್ಲೇ ಇದೆ.
ನೀರು ಸಂಗ್ರಹವಾಗುತ್ತಿದ್ದ ವೈಷಿಷ್ಠ್ಯತೆ
ಈ ಬಾವಿಯಲ್ಲಿ ಯಾವ ರೀತಿ ನೀರು ಸಂಗ್ರಹವಾಗುತ್ತದೆ ಎಂಬುವುದೇ ಒಂದು ಅಚ್ಚರಿ. ಹಾಗೆಂದು ಈ ಬಾವಿಯೆಂದು ಕರೆಯಬೇಕಾದ ಲಕ್ಷಣವೇ ಇಲ್ಲ. ಬಾವಿಯಾದರೆ ಹಲವಾರು ಅಡಿಗಳಷ್ಟು ಗುಂಡಿ ಇರಬೇಕು. ಆದರೆ ಇದರ ರಚನೆ ಹೇಗಿದೆಯೆಂದರೆ ಈ ನೀರು ಹರಿದುಹೋಗದಂತೆ ಸಂಗ್ರಹಿಸಲೆಂದು ಸ್ವಲ್ಪ ಅಡಿಗಳವರೆಗೆ ಕಲ್ಲು ಕಟ್ಟಿದ್ದರು. ಆದರೆ ತಪ್ಪಿಯೂ ಅವರು ಗುಂಡಿ ತೋಡಿರಲಿಲ್ಲ. ಚಿಕ್ಕ ಹಳ್ಳದಂತ ರಚನೆಯನ್ನು ಬಾವಿ ಎಂದು ಕರೆಯಲಾಗುತ್ತಿತ್ತು.
ಇನ್ನೊಂದು ಮುಖ್ಯ ಅಂಶವೆಂದರೆ ಈ ಬಾವಿಗೆ ಎಲ್ಲೂ ಕೂಡಾ ಒಸರು ಬರುವುದಿಲ್ಲ. ಒಸರು ಬರುವ ಕುರುಹು ಕೂಡಾ ಎಲ್ಲೂ ಕೂಡಾ ಕಾಣುವುದಿಲ್ಲ. ಪ್ರಾಕೃತಿಕವಾಗಿ ಮಣ್ಣಿನ ನೀರು ಇಂಗಿಕೊಂಡು ಅದು ಈ ಬಾವಿಯಲ್ಲಿ ಸಂಗ್ರಹವಾಗುವುದು ಇದರ ಲಕ್ಷಣವಾಗಿದೆ.
ಈ ಬಾವಿಯ ಒಂದು ಬದಿ ಎತ್ತರವಾದ ಗುಡ್ಡದಂತೆ ಇದೆ. ಗುಡ್ಡದ ನೀರು ಭೂಮಿಯಲ್ಲಿ ಇಂಗಿ ಈ ಬಾವಿಯಲ್ಲಿ ಸಂಗ್ರಹವಾಗಿರುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾವಿಗೆ ತಾಗಿಕೊಂಡಂತಿರುವ ಗುಡ್ಡದ ಬದಿ ಯಾವಾಗಲೂ ಒದ್ದೆಯಾಗಿರುವುದನ್ನು ಗಮನಿಸಬಹುದಿತ್ತು.
ಇನ್ನೊಂದು ಪ್ರಮುಖ ವಿಚಾರವೆಂದರೆ ಈ ರೀತಿ ಸಂಗ್ರಹವಾದ ನೀರು ಅಷ್ಟೇ ಪ್ರಮಾಣದಲ್ಲಿ ಹೊರಗಡೆ ಹರಿದುಹೋಗುತ್ತಿತ್ತು. ಈ ನೀರನ್ನು ಬಸಿಯಲೆಂದು ಬಾವಿಯ ಒಂದು ಭಾಗದಲ್ಲಿ ರಂಧ್ರ ಕೊರೆಯಲಾಗಿದ್ದು, ಆ ನೀರನ್ನು ಗದ್ದೆ ತೋಟಕ್ಕೆ ಹರಿಸಲಾಗುತ್ತಿತ್ತು.
ಪ್ರತೀ ವರ್ಷ ಈ ಬಾವಿಯ ಕೆಸರು ತೆಗೆಯಲಾಗುತ್ತಿತ್ತು. ಆದರೆ ಈ ವೇಳೆ ಹಾರೆ ಪಿಕಾಸು ಉಪಯೋಗಿಸುತ್ತಿರಲಿಲ್ಲ. ಅದರ ಬದಲಾಗಿ ಕೈಯ್ಯಿಂದಲೇ ಕೆಸರು ತೆಗೆದು ಸ್ವಚ್ಛಗೊಳಿಸಲಾಗುತ್ತಿತ್ತು. ನೀರನ್ನು ಹೊರಗೆ ಚೆಲ್ಲಿ ಒಂದರಿಂದ ಎರಡು ಗಂಟೆಯೊಳಗಡೆ ಬಾವಿ ಭರ್ತಿಯಾಗಿ ಹೊರಗಡೆ ಚೆಲ್ಲುತ್ತಿತ್ತು.
ಬಾವಿಗೆ ನೀರು ಸೇರುವ ಸ್ಥಳದಲ್ಲಿ ಹಲವು ಬಗೆಯ ಹುಲ್ಲುಗಳಿದ್ದವು. ಈ ಹುಲ್ಲಿನ ಬೇರುಗಳಲ್ಲಿ ಹನಿಹನಿಯಾಗಿ ಬೀಳುವುದನ್ನು ಗಮನಿಸಬಹುದಿತ್ತು. ಹೀಗೆ ನೋಡಿದಾಗ ಹುಲ್ಲೇ ನೀರನ್ನು ಸೃಷ್ಟಿಸಿದಂತೆ ಕಂಡುಬರುತ್ತಿತ್ತು. ಇದಕ್ಕೆ ಹಿರಿಯರು ಹಾರೆಯನ್ನು ಉಪಯೋಗಿಸದೆ ಆ ಹುಲ್ಲನ್ನು ಹಾಗೆಯೇ ಬಿಟ್ಟಿದ್ದರು.
ಇಷ್ಟೆಲ್ಲಾ ಗುಣ ಲಕ್ಷಣಗಳನ್ನು ಹೊಂದಿದ್ದ ಬಾವಿಯಲ್ಲಿ ಯಾವುದೇ ಬೇಸಿಗೆಯಲ್ಲೂ ನೀರು ಖಾಲಿಯಾಗುತ್ತಿರಲಿಲ್ಲ. ಇಡೀ ಊರಿನ ಬಾವಿಯ ನೀರು ಇಂಗಿ ತಳ ಕಾಣುತ್ತಿದ್ದರೂ, ಇದು ಖಾಲಿಯಾದ ಉದಾಹರಣೆ ಇರಲಿಲ್ಲ. ಬರಗಾಲದ ಸಂದರ್ಭ ಈ ಬಾವಿಯ ನೀರನ್ನು ಉಪಯೋಗಿಸುತ್ತಿದ್ದರು.
ಮಾನವ ಹಸ್ತಕ್ಷೇಪದಿಂದ ನೀರೇ ಮಾಯವಾಯಿತು:
ನೂರಾರು ವರ್ಷಗಳ ಕಾಲ ಪ್ರಾಕೃತಿಕವಾಗಿ ನೀರನ್ನು ಹರಿಸಿ ಅಚ್ಚರಿಗೆ ಕಾರಣವಾಗಿದ್ದ ಬಾವಿ ಕಳೆದ ವರ್ಷ ಬೇಸಿಗೆಯಲ್ಲಿ ಬತ್ತಿದ ಪರಿಣಾಮ ಯುಗಾಂತ್ಯಕಂಡಿತು. ಆ ಬಾವಿಯ ಮನೆಯವರು ಬಾವಿಯನ್ನು ಸ್ವಲ್ಪ ಅಗಲ ಮಾಡಿಕೊಂಡು ಮನೆಗೆ ಪಂಪ್ ಮೂಲಕ ನೀರು ಹರಿಸಬೇಕೆಂದು ಆ ಬಾವಿಯಲ್ಲಿ ಗುಂಡಿ ತೋಡಿದರು. ಬಾವಿಯ ಗೋಡೆಯ ಮುಖಾಂತರ ಹರಿಯುತ್ತಿದ್ದ ಭಾಗವನ್ನು ಹಾರೆಯಿಂದ ಕೊರೆದು, ಕೆಸರನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದರು.
ಹುಲ್ಲಿನ ಬೇರುಗಳಲ್ಲಿ ಹನಿಹನಿಯಾಗುತ್ತಿದ್ದ ಭಾಗವನ್ನೆಲ್ಲಾ ಹಾರೆಯಿಂದ ಸಮತಟ್ಟುಗೊಳಿಸಿ ಸ್ವಚ್ಛಗೊಳಿಸಿದರು. ಇಷ್ಟೆಲ್ಲಾ ಮಾಡಿ ಬಾವಿಯಲ್ಲಿ ನೀರು ಜಾಸ್ತಿಯಾಗಬೇಕೆಂದು ಭಾವಿಸಿದ್ದ ಮನೆಯವರಿಗೆ ನಿರಾಶೆ ಕಾಡಿತ್ತು. ಯಾಕೆಂದರೆ ಅಂದು ಬತ್ತಿಹೋದ ಬಾವಿಯಲ್ಲಿ ಮತ್ತೆ ನೀರು ಸಂಗ್ರಹವಾಗಲೇ ಇಲ್ಲ. ಆ ಭಾಗದಲ್ಲಿ ಬಾವಿಯೊಂದು ಇತ್ತೆಂಬ ಕುರುಹೂ ಇಲ್ಲದಂತೆ ಅಲ್ಲಿನ ನೀರು ಮಾಯವಾಗಿದೆ.
ಮತ್ತೆ ನೀರು ಸಂಗ್ರಹವಾಗಿದ್ದು, ಮಳೆಗಾಲದ ನಂತರವಷ್ಟೆ. ಆದರೆ ಇದು ಮಳೆಯ ನೀರಾಗಿದ್ದು, ಮೊದಲಿನಂತೆ ಸಂಗ್ರಹವಾಗಿದ್ದ ನೀರಲ್ಲ. ಬಾವಿ ಭರ್ತಿಯಾಗಿ ಹೊರಗಡೆ ಚೆಲ್ಲುತ್ತಿದ್ದ ನೀರು ಈ ಬಾರಿ ಚೆಲ್ಲುವುದನ್ನೇ ಮರೆತುಬಿಟ್ಟಿದೆ. ಮಾನವ ಹಸ್ತಕ್ಷೇಪದಿಂದ ಬಾವಿಯೊಂದು ಘೋರ ದುರಂತವನ್ನು ಕಂಡಿತು.
ಸಾಮಾನ್ಯ ಬಾವಿಗೆ ಒದಗಿದ ಗತಿ
ಮುಂದೆ ಎತ್ತಿನ ಹೊಳೆಗೂ ಬರಲಿದೆ
ಇದೇ ವಿಚಾರವನ್ನು ಎತ್ತಿನ ಹೊಳೆ ಯೋಜನೆಯ ಮೂಲಕ ಮಾನವ ಹಸ್ತಕ್ಷೇಪದಿಂದ ಏನಾಗುತ್ತದೆ ಎಂಬುವುದನ್ನು ತಿಳಿಯಬಹುದು. ಈ ಘಟನೆಯನ್ನು ಅಂತ್ಯದ ಕರೆಗಂಟೆಯಾಗಿ ಸ್ವೀಕರಿಸಬೇಕಾಗಿದೆ.
ಸುಮಾರು 13 ಸಾವಿರ ಕೋಟಿ ರೂ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 500 ಮೆಗಾ ವ್ಯಾಟ್ ವಿದ್ಯುತ್ ಬಳಸಿ 24 ಟಿಎಂಸಿ ನೀರನ್ನು ಅಡ್ಡಗಟ್ಟಿ ಪಂಪ್ ಮೂಲಕ ಉತ್ತರ ಕರ್ನಾಟಕಕ್ಕೆ ಹರಿಸುವುದು ಇದರ ಉದ್ದೇಶ.
ಇದೊಂದು ಪ್ರಕೃತಿಯೊಡನೆ ಮಾನವ ಹಸ್ತಕ್ಷೇಪ ಮಾಡುವುದರಿಂದ ಮೇಲೆ ತಿಳಿಸಿದ ಬಾವಿಯ ಉದಾಹರಣೆ ತೆಗೆದುಕೊಂಡಾಗ ಎತ್ತಿ ಹೊಳೆಯ ನೀರು ನಾಶವಾಗುತ್ತದೆ ಅಥವಾ ನೀರು ತನ್ನ ಪಥವನ್ನು ಬದಲಿಸಬಹುದು. ಇಷ್ಟು ಕೋಟಿ ಹಣ ವಿನಿಯೋಗಿಸಿ ಕೆಲಸ ನಿರ್ವಹಿಸಿದಾಗ ಪ್ರಕೃತಿ ಸಾಕಷ್ಟು ನಾಶವಾಗುತ್ತದೆಯಲ್ಲದೆ, ಪ್ರಕೃತಿಯ ದಿನಚರಿಗ ಪೆಟ್ಟುಬಿದ್ದು ಎತ್ತಿನ ಹೊಳೆ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಎತ್ತಿನ ಹೊಳೆಯಲ್ಲಿ ಗುಡ್ಡದಲ್ಲಿರುವ ನೀರು ಪ್ರಾಕೃತಿಕವಾಗಿ ಹರಿದು ಹಳ್ಳವನ್ನು ಸೇರಿ ಹರಿಯುತ್ತದೆ. ಈ ಭಾಗದಲ್ಲಿ ಹಲವಾರು ಎತ್ತಿನ ಹೊಳೆಯಂಥದ್ದೇ ಹಲವು ಹೊಳೆಗಳಿವೆ. ಕೆಂಪುಹೊಳೆಮ ಕೇರಿಹೊಳೆ, ಹೊಂಗಡ ಹೊಳೆ, ಎತ್ತಿನಹೊಳೆ, ಎತ್ತಿನ ಹಳ್ಳ, ಹಕ್ಕಿಹೊಳೆ, ಕಾಡುಮನೆ ಹೊಳೆ ಈ ಎಲ್ಲಾ ನದಿಮೂಲಗಳಿಗೆ ಮಾನವ ಹಸ್ತಕ್ಷೇಪ ನಡೆಯುತ್ತದೆ. ಇಲ್ಲೆಲ್ಲಾ ನೀರು ಹೇಗೆ ಸಂಗ್ರಹವಾಗುತ್ತದೆ ಎಂದು ಯಾರೂ ಕೂಡಾ ಸರಿಯಾದ ಅಧ್ಯಯನ ನಡೆಸಿಲ್ಲ. ಗುಡ್ಡದ ಮೇಲೆ ಚದುರಿರುವ ನೀರು ಪ್ರಾಕೃತಿಕವಾಗಿ ಮರಗಳ ಬೇರು, ಗುಡ್ಡದಲ್ಲಿರುವ ರಂಧ್ರ, ಹುಲ್ಲಿನ ಬೇರಿನ ಮುಖಾಂತರ ಮೇಲೆ ತಿಳಿಸಿದ ನದಿಮೂಲಗಳಿಗೆ ಸೇರುತ್ತದೆ. ಮಾನವ ಹಸ್ತಕ್ಷೇಪ ನಡೆದರೆ ಈ ಪ್ರಕ್ರಿಯೆ ಅಲ್ಲೇ ನಿಂತು ನೀರು ಮಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು. ಅಲ್ಲದೆ ಈ ಯೋಜನೆಗೆ ವಿನಿಯೋಗಿಸಿದ 13 ಸಾವಿರ ಕೋಟಿ ಹಣದಿಂದ ಬೇರೆ ವಿಧಾನದಲ್ಲಿ ಆರಾಮವಾಗಿ ನೀರು ಹರಿಸಬಹುದು.
ಗಿರೀಶ್ ಮಳಲಿ




