ಸುದ್ದಿ9 ಬಂಟ್ವಾಳ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಬೊಲ್ಪು ಕಲಾತಂಡ ಮಂಚಿ ಇದರ ಸಹಯೋಗದೊಂದಿಗೆ ಎ.21-23ರವರೆಗೆ ಮೂರು ದಿನಗಳ ಕಾಲ ತುಳು ಜಾನಪದ ನಲಿಕೆ ತರಬೇತಿ ಕಮ್ಮಟವು ಮಂಚಿಯ ನೂಜಿಬೈಲ್ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ತಿಳಿಸಿದ್ದಾರೆ.
ಶುಕ್ರವಾರ ಬಿ.ಸಿ ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲಾ ಸಂಚಾಲಕರಾದ ಶಾಂತಲಾ ಎನ್.ಭಟ್ ಅವರು ಕಮ್ಮಟದ ಉದ್ಘಾಟನೆ ನೆರವೇರಿಸಲಿದ್ದು, ಅಕಾಡೆಮಿಯ ಅಧ್ಯಕ್ಷ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಎ.23ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಣಿಯಾಡಿ ಪ್ರಶಸ್ತಿ ವಿಜೇತ, ಸಾಹಿತಿ ವಿಜಯ ಶೆಟ್ಟಿ ಸಾಲೆತ್ತೂರು ಸಮಾರೋಪ ಭಾಷಣ ಮಾಡುವರು. ಶಾಲೆಯ ಮುಖ್ಯ ಶಿಕ್ಷಕ ಲೋಕನಾಥ ಬಿ.ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅಕಾಡೆಮಿಯ ವತಿಯಿಂದ ತುಳು ಜಾನಪದ ನಲಿಕೆ, ಗೀತ ಗಾಯನ, ನಾಟಕ ರಚನೆ ಮೊದಲಾದ ವಿಷಯಗಳ ಬಗ್ಗೆ ವಿವಿಧ ತಾಲೂಕುಗಳಲ್ಲಿ ತರಬೇತಿ ಕಮ್ಮಟಗಳನ್ನು ನಡೆಸಲುದ್ದೇಶಿಸಲಾಗಿದೆ. ಸುಳ್ಯದ ಬೆಳ್ಳಾರೆ, ಪುತ್ತೂರಿನ ಸವಣೂರಿನಲ್ಲಿ ಈಗಾಗಲೆ ಜಾನಪದ ನಲಿಕೆಯ ಕಮ್ಮಟ ನಡೆಸಲಾಗಿದೆ. ಇದೀಗ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಪ್ರಸ್ತುತ ಸಾಲಿನ ಮೂರನೇ ಕಮ್ಮಟ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯ ರಘು ಇಡ್ಕಿದು, ಕೊರಗಪ್ಪ ಶೃಂಗಾರಕೋಡಿ, ಎಂ.ಡಿ.ಮಂಚಿ, ಅಶೋಕ್ ಬಿ., ತಮ್ಮಯ್ಯ ಬಿ., ಮಂಜುವಿಟ್ಲ ರವರು ಉಪಸ್ಥಿತರಿದ್ದರು.
