ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರಕಲ ಎಂಬಲ್ಲಿ ವೃದ್ಧರೋರ್ವರನ್ನು ಸಂಬಂಧಿಕರಿಬ್ಬರು ಕೊಲೆಗೈದಿದ್ದು, ಆರೋಪಿಗಳಿಗೆ ಮೂಡುಬಿದರೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಕೂಲಿ ಕಾರ್ಮಿಕ ಗುರುವ ಅವರನ್ನು, ಅವರ ಪತ್ನಿಯ ತಮ್ಮ ಸದಾನಂದ ಹಾಗೂ ಸಂಬಂಧಿಕರಾದ ಬಾಬು ಎಂಬವರು ಸೋಮವಾರ ರಾತ್ರಿ ಬಾವಿಗೆ ದೂಡಿ ಕೊಲೆಗೈದಿದ್ದಾರೆ. ಮಂಗಳವಾರ ಗುರುವ ಅವರ ಮನೆಯ ಮುಂದಿನ ಬಾವಿಯಲ್ಲೇ ಶವ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ಸಂದರ್ಭ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ತಾವೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
